ದಾವಣಗೆರೆ :ನೀವೆಲ್ಲ ಅನೇಕ ಮ್ಯೂಸಿಯಂಗಳನ್ನು ನೋಡಿರಬಹುದು. ಅಲ್ಲಿನ ಸಂಗ್ರಹಗಳನ್ನು ನೋಡಿ ಹುಬ್ಬೇರಿಸಿರಬಹುದು. ಆದರೆ, ಬೆಣ್ಣೆನಗರಿ ದಾವಣಗೆರೆಯಲ್ಲೊಂದು ಅಪರೂಪದಲ್ಲೇ ಅಪರೂಪ ಎನ್ನುವಂಥ ಸಂಗ್ರಹಾಲಯವಿದೆ.
ಒಂದಕ್ಕಿಂತ ಮತ್ತೊಂದು ಡಿಫರೆಂಟ್. ಒಂದು ನೋಡಿದರೆ ಮಗದೊಂದು ಇನ್ನೂ ಸ್ಪೆಷಲ್ ಆಗಿದೆಯಲ್ಲಾ ಅಂತಾ ನಿಮಗೆ ಅನಿಸದೇ ಇರದು. ಈ ತೂಕದ ಯಂತ್ರಗಳ ಲೋಕ ಇರೋದು ನಗರದ ಚಾಮರಾಜಪೇಟೆಯಲ್ಲಿ.
ಶಂಕರ್ ಎಂಟರ್ಪ್ರೈಸಸ್ನ ಮೊದಲನೇ ಮಹಡಿಯಲ್ಲಿರುವ ತುಲಾಭವನ ಸಭಾಂಗಣದಲ್ಲಿ ಹಿಂದಿನ ಕಾಲದಿಂದ ಹಿಡಿದು ಮೊನ್ನೆ ಮೊನ್ನೆಯವರೆಗೆ ಬಳಕೆ ಮಾಡಿದ ತೂಕ ಅಳೆಯುವ ಪರಿಕರಗಳಿವೆ. ಈ ಎಲ್ಲಾ ವಸ್ತುಗಳೂ ಇಂದಿಗೂ ಬಳಕೆಗೆ ಯೋಗ್ಯವಾಗಿರುವುದು ಇಲ್ಲಿನ ಮತ್ತೊಂದು ಸ್ಪೆಷಾಲಿಟಿ.ಈ ಸಂಗ್ರಹಾಲಯದಲ್ಲಿ ನಾಲ್ಕು ಶತಮಾನಗಳಿಗೆ ಸಂಬಂಧಿಸಿದ ಮೂರು ಸಾವಿರಕ್ಕೂ ಹೆಚ್ಚು ವಿವಿಧ ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಬಹುತೇಕ ಸಾಧನಗಳ ಕೆಳಗಡೆ ಅವುಗಳ ಹೆಸರು ಬರೆಯಲಾಗಿದೆ.
ಕೆಲ ಪರಿಕರಗಳ ಸಂಪೂರ್ಣ ಮಾಹಿತಿ ನೀಡುವ ಕೆಲಸವೂ ನಡೆಯುತ್ತಿದೆ. ಬಸವರಾಜ್ ಯಳಮಲ್ಲಿ ಎಂಬುವರು ಈ ಸಂಗ್ರಹಾಲಯದ ರೂವಾರಿ. ದೇಶದಲ್ಲಿಯೇ ಪ್ರಪ್ರಥಮ ತೂಕ ಅಳತೆಯ ಸಂಗ್ರಹ ಹೊಂದಿರುವ ತಾಣ ಎಂಬ ಖ್ಯಾತಿ ಹೊಂದಿರುವ ತುಲಾಭವನದ ಸ್ಥಾಪನೆಯ ಹಿಂದೆಯೂ ಒಂದು ಕಥೆ ಇದೆ.
ದಾವಣಗೆರೆಯಲ್ಲಿರುವ ಮ್ಯೂಸಿಯಂ 1975ರಲ್ಲಿ ಬಸವರಾಜ್ ತಂದೆ ದಾವಣಗೆರೆಯಲ್ಲಿ ತೂಕ ಅಳತೆ ಪರಿಕರಗಳ ವ್ಯಾಪಾರ ನಡೆಸುತ್ತಿದ್ದರು. ಇದೇ ವ್ಯಾಪಾರವನ್ನು ಬಸವರಾಜ್ ಮುಂದುವರಿಸಿಕೊಂಡು ಹೋಗುತ್ತಿದ್ದರು. ಆರಂಭದಲ್ಲಿ ಹಳೆಯ ಕಾಲದ ನೋಟು, ನಾಣ್ಯ, ಅಂಚೆ ಚೀಟಿಗಳ ಸಂಗ್ರಹದ ಹವ್ಯಾಸ ರೂಢಿಸಿಕೊಂಡಿದ್ದ ಬಸವರಾಜ್ ತನ್ನ ವೃತ್ತಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿ ಎಲ್ಲರಿಗೂ ಪರಿಚಯ ಮಾಡಿಕೊಡಬೇಕು ಎಂಬ ಹೆಬ್ಬಯಕೆ ಹೊಂದಿದ್ರು. ಸತತ 18 ವರ್ಷಗಳ ಪರಿಶ್ರಮದ ಪ್ರತಿಫಲವೇ ತುಲಾಭವನ ಎಂಬ ತೂಕ ಅಳತೆಗೆ ಸಂಬಂಧಿಸಿದ ಯಂತ್ರಗಳ ಅದ್ಭುತ ಲೋಕ ಸೃಷ್ಟಿ.
400 ವರ್ಷದ ರಾಜರುಗಳ ಕಾಲದ ತೂಕ ಅಳತೆ ಯಂತ್ರಗಳೂ ಇಲ್ಲಿವೆ...!
ದೇಶದ ವಿವಿಧೆಡೆ ತೂಕ ಯಂತ್ರಗಳ ಸಂಗ್ರಹಾಲಯವಿದೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಭಾರತ ದೇಶದಲ್ಲಿ ಎಲ್ಲಿಯೂ ಇಲ್ಲ. 2016ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿರುವ ಈ ಮ್ಯೂಸಿಯಂ ದೇಶದಲ್ಲಿಯೇ ಪ್ರಥಮ ಎಂಬ ಹಿರಿಮೆ ಹೊಂದಿದೆ.
ಈಶಾನ್ಯ ರಾಜ್ಯಗಳು, ಜಮ್ಮು ಕಾಶ್ಮೀರ, ರಾಜ್ಯದ ನಾನಾ ಮೂಲೆಗಳಿಗೆ ಹೋಗಿ ಬಸವರಾಜ್ ತೂಕ ಯಂತ್ರಗಳ ಬಗ್ಗೆ ಅಧ್ಯಯನ ನಡೆಸಿ, ಹಳೆಯ ಕಾಲದ ಪರಿಕರಗಳನ್ನು ಖರೀದಿಸಿದ್ದಾರೆ. ಕೆಲ ಕಡೆ ಎಷ್ಟೇ ದುಬಾರಿ ಎನಿಸಿದರೂ ತೆಗೆದುಕೊಂಡು ತಂದಿದ್ದಾರೆ. ದೇಶ ವಿದೇಶಗಳಲ್ಲಿ ರೂಪಿಸಲಾದ ರಾಜ ಮನೆತನಗಳ ಕಾಲದಲ್ಲಿ ಬಳಕೆಯಲ್ಲಿದ್ದ ತೂಕ ಅಳತೆಯ ಸಾಧನಗಳು ಒಂದೇ ಸೂರಿನಲ್ಲಿವೆ.
18ನೇ ಶತಮಾನದಲ್ಲಿ ಬಳಸುತ್ತಿದ್ದ ಡಬ್ಬಿ ಸಹ ಇಲ್ಲಿದೆ. ವಿಜಯಪುರ,ಕಲಬುರ್ಗಿ, ರಾಯಚೂರು ಭಾಗಗಳಲ್ಲಿ ಸುಲ್ತಾನರ ಆಡಳಿತ ಕಾಲದಲ್ಲಿ ಬಳಸುತ್ತಿದ್ದ ತಾಮ್ರ ಮತ್ತು ಹಿತ್ತಾಳೆಯಿಂದ ಮಾಡಿದ ನೆಲ್ಲಿಕಾಯಿ ಆಕಾರದ ತೂಕದ ಬಟ್ಟುಗಳ ಸಂಗ್ರಹ, ಚೌಕಾಕಾರದ ಹಿತ್ತಾಳೆ ಬಟ್ಟುಗಳು,ಮೈಸೂರು ಒಡೆಯರ ಕಾಲದ ಹಿತ್ತಾಳೆಯ ಸೇರಿನ ಮಾಪುಗಳು, ಗಂಡ ಭೇರುಂಡ ಲಾಂಛನವಿರುವ ಆಯತಾಕಾರದ ಅರ್ಧ ಮಣ ಮತ್ತು ಕಾಲು ಮಣದ ಕಬ್ಬಿಣದ ಬಟ್ಟುಗಳು ಇಲ್ಲಿವೆ.
ಅಮೆರಿಕಾ, ಜಪಾನ್, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬಳಸುವ ತೂಕ ಯಂತ್ರದ ಸಾಧನಗಳನ್ನು ಇಲ್ಲಿಗೆ ಬಂದರೆ ಕಣ್ತುಂಬಿಕೊಳ್ಳಬಹುದು. ಬ್ರಿಟೀಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ನಮೂನೆಯ ತೂಕದ ಯಂತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಭಾರತದಲ್ಲಿ ಆಳಿದ 645 ರಾಜರುಗಳ ಕಾಲಘಟ್ಟದಲ್ಲಿ ಬಳಸಿದ್ದ ತೂಕ ಯಂತ್ರಗಳು ಪ್ರದರ್ಶನದಲ್ಲಿವೆ.
ಸದ್ಯದಲ್ಲಿಯೇ ಗಿನ್ನಿಸ್ ಪುಟ ಸೇರಲಿದೆ ಈ ಮ್ಯೂಸಿಯಂ...!
ಈಗಾಗಲೇ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಎಲ್ಲಾ ಅರ್ಹತೆಯನ್ನು ಈ ಸಂಗ್ರಹಾಲಯ ಹೊಂದಿದೆ. ಜೊತೆಗೆ ಗಿನ್ನಿಸ್ ರೆಕಾರ್ಡ್ ಮಾಡುವುದಕ್ಕಾಗಿ ಅನುಮತಿಯೂ ದೊರೆತಿದೆ. ವಿಶ್ವದಲ್ಲೇ ಇಷ್ಟೊಂದು ಪ್ರಮಾಣದ ತೂಕ ಯಂತ್ರಗಳು ಎಲ್ಲಿಯೂ ಇಲ್ಲ ಎಂಬ ಬಗ್ಗೆ ಸಾಬೀತುಪಡಿಸಿ ಎಂದು ಸೂಚನೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಇದನ್ನು ಸಾಧಿಸಿ ತೋರಿಸುತ್ತೇವೆ. ಈ ಮೂಲಕ ದೇಶಕ್ಕೆ ಸಮರ್ಪಿಸಬೇಕೆಂಬ ಆಸೆ ಇದೆ ಅಂತಾರೆ ಈ ಸಂಗ್ರಹಾಲಯದ ಸಂಸ್ಥಾಪಕ ಬಸವರಾಜ್.
ಭಾನುವಾರ ಈ ಸಂಗ್ರಹಾಲಯದಲ್ಲಿ ಉಚಿತ ಪ್ರದರ್ಶನವಿದೆ. ರಾಜ್ಯದ ಬೇರೆ ಬೇರೆ ಮೂಲೆಗಳಿಂದ ನೂರಾರು ವಿದ್ಯಾರ್ಥಿಗಳು, ಆಸಕ್ತರು ಬಂದು ವೀಕ್ಷಿಸಿ ಹೋಗುತ್ತಿದ್ದಾರೆ. ಇಲ್ಲಿರುವಂಥ ತೂಕ ಅಳತೆಯ ಸಾಧನಗಳನ್ನು ಎಲ್ಲಿಯೂ ನೋಡಿಲ್ಲ. ಇದೊಂದು ಅದ್ಭುತ ಸಂಗ್ರಹಾಲಯ. ಇದನ್ನು ನೋಡುತ್ತಿದ್ದರೆ ಖುಷಿಯಾಗುತ್ತದೆ. ದೇಶದ ಬೇರೆ ಎಲ್ಲಿಯೂ ಇಂಥದ್ದೊಂದು ಮ್ಯೂಸಿಯಂ ಇಲ್ಲ ಎನ್ನುತ್ತಾರೆ ಮಂಜುನಾಥ್. ಒಟ್ಟಿನಲ್ಲಿ ಬೆಣ್ಣೆನಗರಿಯಲ್ಲಿರುವ ಈ ಮ್ಯೂಸಿಯಂ ಗಿನ್ನಿಸ್ ಪುಟ ಸೇರಿ ದಾವಣಗೆರೆ ಹೆಸರು ವಿಶ್ವಮಟ್ಟದಲ್ಲಿ ಪಸರಿಸುವಂತೆ ಮಾಡಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.