ಕೋಲ್ಕತ್ತಾ:ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದು,ಈ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಂದಿನ ಚುನಾವಣೆಯನ್ನು ಚತುರ ಹೆಜ್ಜೆಯಿಟ್ಟು ಎದುರಿಸುವ ಯೋಚನೆ ಮಾಡಿದ್ದಾರೆ.
ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿರುವ ಮಮತಾ,ತಮ್ಮೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವಂತೆ ಆಹ್ವಾನಿಸಿದ್ದಾರೆ.
42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 34 ಕ್ಷೇತ್ರಗಳನ್ನು ಜಯಿಸಿತ್ತು. ಬಿಜೆಪಿ ಕೇವಲ ಎರಡು ಸ್ಥಾನಗಳಿಗಷ್ಟೇ ತೃಪ್ತಿಪಟ್ಟಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 18 ಸ್ಥಾನಗಳನ್ನು ಪಡೆದು ಮಿಂಚಿದರೆ ಅತ್ತ ಟಿಎಂಸಿ 22 ಸ್ಥಾನಕ್ಕೆ ಕುಸಿತ ಕಂಡಿದೆ. ಇದು ಸಹಜವಾಗಿಯೇ ಆಡಳಿತಾರೂಢ ಟಿಎಂಸಿ ಇರಿಸು ಮುರಿಸನ್ನುಂಟು ಮಾಡಿದೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿ ದೀದಿ ಮುಂದಾಲೋಚನೆಯಲ್ಲಿ ಪ್ರಶಾಂತ್ ಕಿಶೋರ್ರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ. ಪ್ರಶಾಂತ್ ಕಿಶೋರ್ ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಭರ್ಜರಿ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದರು.
2021 ರಲ್ಲಿ ಪಶ್ಚಿಮ ಬಂಗಾಲ ವಿಧಾನಸಭೆಗೆ ಚುನಾವಣೆ ನಡೆಯಲಿದೆ.