ಬೆಂಗಳೂರು: ಇಲ್ಲಿನ ಸಂಪಂಗಿರಾಮನಗರದ ವಿ.ಟಿ. ಪ್ಯಾರಡೈಸ್ನಲ್ಲಿ ನಾಳೆ ಸಂಜೆ 5.30 ಕ್ಕೆ ಈ ಬಾರಿಯ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿನ ಪ್ರಶಸ್ತಿ ವಿವಾದಕ್ಕೆ ಕಡೆಗೂ ಇತಿಶ್ರೀ ಹಾಡಲಾಗಿದೆ. ಬಿಬಿಎಂಪಿ ಪ್ರತಿ ವರ್ಷ ನಗರದ ಸಾಧಕರನ್ನು ಗುರುತಿಸಿ ಕೆಂಪೇಗೌಡ ಪ್ರಶಸ್ತಿ ನೀಡುತ್ತದೆ. ಆದರೆ ಈ ವರ್ಷ ಪಾಲಿಕೆಯ ನೌಕರರ ಸಂಘಟನೆಯೂ ಕೆಂಪೇಗೌಡ ಪ್ರಶಸ್ತಿ ಹೆಸರಿನಲ್ಲೇ ಪ್ರಶಸ್ತಿ ನೀಡಲು ತಯಾರಿ ನಡೆಸಿ ವಿವಾದವಾಗಿತ್ತು.
ಪಾಲಿಕೆಯ ಒಳಗೆ ಹೊಂದಾಣಿಕೆ ಇಲ್ಲ. ಬಿಬಿಎಂಪಿ ಕಚೇರಿಯ ಮೇಲೆಯೇ ನೌಕರರ ಸಂಘಟನೆ ದಬ್ಬಾಳಿಕೆಗೆ ಮುಂದಾಗಿದೆ ಎಂಬೆಲ್ಲ ಊಹಾಪೋಹಗಳು ಕೇಳಿಬರುತ್ತಿದ್ದವು. ಆದ್ರೆ ಪ್ರಶಸ್ತಿಯ ಹೆಸರನ್ನು ಬದಲಿಸುವಂತೆ ಮೇಯರ್ ಗಂಗಾಂಬಿಕೆ ಪತ್ರ ಬರೆದು, ಅದಕ್ಕೆ ನೌಕರರ ಸಂಘಟನೆಯೂ ಕ್ಷಮೆ ಯಾಚಿಸಿ ಹೆಸರು ಬದಲಿಸಲು ಒಪ್ಪಿರುವುದರಿಂದ ಗೊಂದಲ ಬಗೆಹರಿದಿದೆ.
ಈ ಬಗ್ಗೆ ಮಾತನಾಡಿದ ಮೇಯರ್, ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಶಸ್ತಿಯನ್ನು ಕೆಂಪೇಗೌಡ ಪ್ರಶಸ್ತಿ ಹೆಸರಲ್ಲಿ ನೀಡಲು ಮುಂದಾಗಿತ್ತು. ಆದ್ರೆ ಬಿಬಿಎಂಪಿ ಕೂಡಾ ಪ್ರತಿ ವರ್ಷ ಕೆಂಪೇಗೌಡ ದಿನಾಚರಣೆ ನಡೆಸಿ ಪ್ರಶಸ್ತಿ ನೀಡಲಾಗುತ್ತದೆ. ಹಾಗಾಗಿ ನೌಕರರ ಸಂಘ ನೀಡುವ ಪ್ರಶಸ್ತಿ ಹೆಸರನ್ನ ಬದಲಾಯಿಸುವಂತೆ ಪತ್ರ ಬರೆದಿದ್ದೇನೆ ಎಂದರು.
ಬಿಬಿಎಂಪಿಯ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ನಮ್ಮಿಂದ ತಪ್ಪಾಗಿದೆ. ಆದರೆ ಮುಂದೆ ಆಗುವ ಗೊಂದಲವನ್ನು ಈಗಲೇ ಬದಲಾಯಿಸುವ ಅವಕಾಶ ಸಿಕ್ಕಿರುವುದರಿಂದ ಈ ಕೂಡಲೇ ಪ್ರಶಸ್ತಿ ಹೆಸರು ಬದಲಾಯಿಸುತ್ತೇವೆ ಎಂದರು.