ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದ ವಿಶೇಷ ತನಿಖಾ ತಂಡ(ಎಸ್ಐಟಿ)ಗೆ ರಾಜ್ಯ ಸರ್ಕಾರ 25 ಲಕ್ಷ ನಗದು ಬಹುಮಾನ ಘೋಷಿಸಿದೆ.
ಗಂಭೀರ ಹಾಗೂ ಸೂಕ್ಷ್ಮ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗೌರಿ ಲಂಕೇಶ್ ಕೊಲೆ ಕೇಸ್ ಬೇಧಿಸಿದ ಎಸ್ಐಟಿ ತಂಡಕ್ಕೆ ಕೊನೆಗೂ ಸರ್ಕಾರ ನಗದು ಬಹುಮಾನ ಪ್ರಕಟಿಸಿದೆ.
ತನಿಖೆ ಭೇದಿಸಲು ರಚಿಸಲಾಗಿದ್ದ ಎಸ್ಐಟಿಗೆ ಈಗಿನ ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಜಯ್ ಕುಮಾರ್ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿ, ಡಿಸಿಪಿಯಾಗಿದ್ದ ಅನುಚೇತ್ ಅವರನ್ನು ತನಿಖಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ನಾಲ್ವರು ಡಿವೈಎಸ್ಪಿ ಹಾಗೂ 13 ಮಂದಿ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ 91 ಮಂದಿ ಪೊಲೀಸರು ಎಸ್ಐಟಿಯಲ್ಲಿ ಕಾರ್ಯನಿರ್ವಹಿಸಿದ್ದರು.