ಮುಂಬೈ: 2019ರ ಆವೃತ್ತಿಯ ಐಪಿಎಲ್ನಲ್ಲೇ ದುಬಾರಿ ಬೌಲರ್ ಆಗಿರುವ ಜಯ್ದೇವ್ ಉನಾದ್ಕಟ್ಗೆ ಯಾವುದಾದರು ಅಕಾಡೆಮಿ ಸೇರಿಕೊಂಡು ಬೌಲಿಂಗ್ ಮಾಡುವುದನ್ನು ಕಲಿಯಿರಿ ಎಂದ ಅಭಿಮಾನಿಗೆ ತಮ್ಮ ಟ್ವಿಟರ್ನಲ್ಲಿ ತಾಳ್ಮೆಯ ಉತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
2018ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ 11.50 ಕೋಟಿ ರೂಗೆ ಹರಾಜಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಉನಾದ್ಕಟ್ ಆ ಆವೃತ್ತಿಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರ ಮೌಲ್ಯ 2019 ರ ಹರಾಜಿನಲ್ಲಿ 8.5 ಕೋಟಿ ರೂಗೆ ತಗ್ಗಿತ್ತು. ಈ ಬಾರಿಯೂ ಕಳಪೆ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಅಭಿಮಾನಿಯೊಬ್ಬರು ' ದಯವಿಟ್ಟು ಯಾವುದಾದರು ಕ್ರಿಕೆಟ್ ಅಕಾಡೆಮಿಗೆ ಸೇರಿ ಬೌಲಿಂಗ್ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ' ಎಂದು ಉನಾದ್ಕಟ್ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಜಯದೇವ್ ಆಡಿರುವ 11 ಪಂದ್ಯಗಳಲ್ಲಿ 37.2 ಓವರ್ ಮಾಡಿದ್ದು, ಕೇವಲ 10 ವಿಕೆಟ್ ಪಡೆದಿದ್ದಾರೆ. ಆದರೆ 10.66 ಎಕಾನಮಿಯಲ್ಲಿ ಒಟ್ಟು 398 ರನ್ ಬಿಟ್ಟುಕೊಡುವ ಮೂಲಕ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇದಿರಿಂದ ಕೋಪಗೊಂಡ ಅಭಿಮಾನಿ ಟ್ವೀಟ್ ಮಾಡುವ ಮೂಲಕ ತನ್ನ ಆಕ್ರೋಶ ಹೊರ ಹಾಕಿದ್ದಾರೆ.
ಅಭಿಮಾನಿ ಟ್ವೀಟ್ಗೆ ತಾಳ್ಮೆಯಿಂದಲೇ ಉತ್ತರಿಸಿರುವ ಉನಾದ್ಕಟ್, 'ಹೌದು ಬಾಸ್, ನಾನು ಈಗಾಗಲೇ ಕ್ರಿಕೆಟ್ ಅಕಾಡೆಮಿಯನ್ನು ಶಾಶ್ವತವಾಗಿ ಸೇರಿಕೊಂಡಾಗಿದೆ. ನನ್ನ ಆಟವನ್ನು ನಾನು ಉತ್ಕಟಭಾವದಿಂದ ಆಡುತ್ತೇನೆ. ನಾನು ಎಂದಿಗೂ ಸೋಲು-ಗೆಲುವು ಏನೇ ಕಂಡರು ಹೊಸ ವಿಚಾರಗಳನ್ನು ಕಲಿಯುವುದನ್ನು ನಿಲ್ಲಿಸುವುದಿಲ್ಲ. ಆದರೆ ನನ್ನನ್ನು ಹೀಯಾಳಿಸಿ ನೀವು ಏನಾದರು ಕಲಿತಿದ್ದೀರಿ ಎಂದುಕೊಂಡಿದ್ದೇನೆ' ಎಂದು ಉತ್ತರಿಸಿದ್ದಾರೆ.
ಉನಾದ್ಕಟ್ ಈ ಟ್ವೀಟ್ ಮಾಡುತ್ತಿದ್ದಂತೆಯೇ ಟ್ಟಟ್ಟರಿಗರು ಕೂಡ ಕೋಪಗೊಂಡಿದ್ದು ನಿಮ್ಮ ಮೇಲಿಟ್ಟಿದ್ದ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೀರಾ, ಹಾಗಾಗಿ ಅತೃಪ್ತರಾಗಿರುವ ಅಭಿಮಾನಿಗಳ ಮನೋಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕೆೇ ಹೊರತು ಅವರ ಮಾತನ್ನು ನಿಂದನೆ ಎಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.