ಬೆಂಗಳೂರು:ಇಂದಿರಾ ಕ್ಯಾಂಟೀನ್ಗೆ ಹಣದ ಸಂಕಷ್ಟ ಎದುರಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣ ನೀಡಬೇಕಾದ ಸರ್ಕಾರವೂ ಮೌನವಾಗಿದ್ದು, ಬಿಬಿಎಂಪಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಇಂದಿರಾ ಕ್ಯಾಂಟೀನ್ಗೆ ಆಹಾರ ಪೂರೈಸುವ ರಿವಾರ್ಡ್ಸ್ ಹಾಗೂ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗಳಿಗೆ ಫೆಬ್ರವರಿ ತಿಂಗಳಲ್ಲೇ ಪೇಮೆಂಟ್ ಸ್ಥಗಿತವಾಗಿದೆ. ಕಳೆದ ವರ್ಷದ ನವೆಂಬರ್ನಿಂದಲೇ ಅರ್ಧ ಪೇಮೆಂಟ್ ಆಗುತ್ತಿದ್ದು, ಕೋಟಿಗಟ್ಟಲೆ ಹಣ ಪಾವತಿಸಲು ಬಾಕಿ ಇದೆ.
ಈಟಿವಿ ಭಾರತ್ಗೆ ಲಭ್ಯವಾದ ದಾಖಲೆ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗೆ ಪಾವತಿಸಬೇಕಾದ ಬರೋಬ್ಬರಿ 18,19,07,811 ರೂ. ಬಾಕಿ ಇದ್ದು, ಇದರ ದಾಖಲೆಗಳು ಈಟಿವಿ ಭಾರತ್ಗೆ ಲಭ್ಯವಾಗಿವೆ. ಇನ್ನು ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗೂ 12 ಕೋಟಿ ಬಾಕಿ ಇದೆ. ಶೆಫ್ ಟಾಕ್ ಸಂಸ್ಥೆಯ 800 ಸಿಬ್ಬಂದಿಗಳಿಗೆ ಹಾಗೂ ರಿವಾರ್ಡ್ ಸಂಸ್ಥೆಯ 600 ಸಿಬ್ಬಂದಿಗಳಿಗೆ 2 ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗ್ತಿದ್ದಾರೆ. ಹೀಗಾಗಿ ಕ್ಯಾಂಟೀನ್ ನಡೆಸಲು ಕಷ್ಟವಾಗ್ತಿದೆ ಎಂದು ಗುತ್ತಿಗೆದಾರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ ಕಿಚನ್ಗೆ ಗ್ಯಾಸ್, ರೇಷನ್ ತರಲು ದುಡ್ಡಿಲ್ಲ. ಬಿಬಿಎಂಪಿ ಆಯುಕ್ತರಿಗೆ ಎಷ್ಟೇ ಬಾರಿ ಪತ್ರ ಬರೆದ್ರೂ ಬಜೆಟ್ ಇಲ್ಲ ಎಂದೇ ಉತ್ತರ ಸಿಗುತ್ತಿದೆ. ಬೇಸಿಗೆಯಲ್ಲಿ ಕಿಚನ್ ಒಂದಕ್ಕೆ 2 ಲಕ್ಷ ರೂ. ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದ ಬಿಲ್, ಪೌರಕಾರ್ಮಿಕರ ಊಟದ 6 ತಿಂಗಳ ಬಿಲ್ ಬಾಕಿ ಇದೆ. ಜನರ ತೆರಿಗೆ ಹಣದಲ್ಲಿ ಕಟ್ಟಿದ ಇಂದಿರಾ ಕ್ಯಾಂಟೀನ್ ಅರ್ಧಕ್ಕೆ ಸ್ಥಗಿತಗೊಳ್ಳಬಾರದು ಅನ್ನೋದು ನಮ್ಮ ಕಾಳಜಿ. ಹೀಗಾಗಿ ಬೇರೆ ಉದ್ಯಮದಿಂದ ಹೇಗೋ ಹಣ ಹೊಂದಿಸಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಕಷ್ಟದಲ್ಲಿ ಮುಂದುವರಿಸ್ತಾ ಇದ್ದೀವಿ. ಸರ್ಕಾರ, ಬಿಬಿಎಂಪಿ ಇನ್ನೂ ಬಿಲ್ ನೀಡದೇ ಹೋದರೆ ಕ್ಯಾಂಟೀನ್ ನಡೆಸಲು ಕಷ್ಟವಿದೆ ಎಂದು ರಿವಾರ್ಡ್ ಸಂಸ್ಥೆಯ ಗುತ್ತಿಗೆದಾರ ತಿಳಿಸಿದ್ದಾರೆ.