ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೂ ಶಾಕ್ ನೀಡಿದೆ. 42 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಈ ಫಲಿತಾಂಶದ ಪರಿಣಾಮ ಇದೀಗ ದೀದಿ ಮೇಲಾಗಿದೆ.
ಲೋಕಸಮರದ ರಿಸಲ್ಟ್‌ನಿಂದ ಆಘಾತಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಚುನಾವಣೆಯಲ್ಲಿ ಸೋಲುಂಡ ಬಳಿಕ ಇದೇ ಮೊದಲ ಬಾರಿಗೆ ದೀದಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವೇಳೆ ತೃಣಮೂಲ ಕಾಂಗ್ರೆಸ್ ಭಾರೀ ಹಿನ್ನೆಡೆ ಅನುಭವಿಸಿದ್ದರಿಂದ ನೈತಿಕ ಹೊಣೆ ಹೊತ್ತು ತಾವು ಸಿಎಂ ಸ್ಥಾನ ತ್ಯಜಿಸುವುದಾಗಿ ತಿಳಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್ ಇದನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.