ಮೈಸೂರು: ಜಮೀನಿಗೆ ಹೋಗದಂತೆ ತಂತಿಬೇಲಿ ಹಾಕಿ ತೊಂದರೆ ಕೊಡುತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಅಧಿಕಾರಿಗಳನ್ನು ಅಂಗಲಾಚಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ರೈತ ಕುಟುಂಬವೊಂದು ಆರೋಪಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನ್ಯಾಯ ಕೊಡಿಸುವಂತೆ ಮನವಿ ಮಾಡಿದ ಪಿರಿಯಾಪಟ್ಟಣ ತಾಲೂಕಿನ ಕೆ. ಬಸವನಹಳ್ಳಿಯ ರೈತ ಕುಟುಂಬ ತಮಗೆನ್ಯಾಯ ಸಿಗದೇ ಹೋದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಜಮೀನು ವಿವಾದ: ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಬಡ ರೈತ ಕುಟುಂಬ ಕೆ.ಬಸವನಹಳ್ಳಿ ಗ್ರಾಮದ ಶಿವಣ್ಣೆಗೌಡ ಎಂಬಾತ ನಮ್ಮ ಜಮೀನಿಗೆ ಹೋಗುವ ದಾರಿಗೆ ತಂತಿಬೇಲಿ ಹಾಕಿಸಿದ್ದಾರೆ. ನ್ಯಾಯ ಕೇಳಿದರೆ ಸುಳ್ಳು ಕೇಸ್ ಹಾಕಿಸಿ ನಮ್ಮನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಸುತ್ತಾರೆ. ಅವರ ಹಾಕಿದ್ದ ಸುಳ್ಳು ಕೇಸ್ನಿಂದ ಬೇಲ್ ಪಡೆದು ಈಗ ಹೊರಗಡೆ ಬಂದಿದ್ದೇನೆ. ಇದರಿಂದ ಹೆದರಿದ ನಾವು ಊರನ್ನೇ ಬಿಟ್ಟಿದ್ದೆವು. ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಮೀನಿನಲ್ಲಿರುವ 1 ಸಾವಿರ ಅಡಿಕೆ ಮರ ಹಾಗೂ ಭತ್ತ ಒಣಗುತ್ತಿದೆ. ದಯವಿಟ್ಟು ಶೀಘ್ರವೇ ಕಾನೂನು ಕ್ರಮ ಜರುಗಿಸಿ ನಮ್ಮ ಜಮೀನು ಕೊಡಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಅಲ್ಲದೆ, ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನೇ ನಂಬಿಕೊಂಡಿದ್ದೇವೆ ಎಂದು ನಾಗರಾಜೇಗೌಡ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಂಗಲಾಚಿದರು.