ಹಾಸನ:ಐದು ವರ್ಷದ ಬಾಲಕ ಸೇರಿದಂತೆ ಇಂದು 11 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಇಂದು ಕಂಡು ಬಂದ 11 ಪ್ರಕರಣಗಳಲ್ಲಿ ಅರಕಲಗೂಡು ತಾಲೂಕಿಗೆ ಸೇರಿದ ಬಾಲಕ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಮದುವೆ ಮಾತುಕತೆಗೆ ಬಂದವರಿಂದ ಈತನಿಗೆ ಸೋಂಕು ಹರಡಿದೆ. ಈ ಸಂಬಂಧ ಬಾಲಕ ವಾಸವಿದ್ದ ಗ್ರಾಮವನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪರಿಶೀಲನೆ ನಡೆಸಿದಾಗ ಐದು ವರ್ಷದ ಬಾಲಕನ ಮನೆಗೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಮೂಲದವರು ಮದುವೆಯೊಂದರ ಮಾತುಕತೆಗೆ ಆಗಮಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರ ಮೂಲಕ ಬಾಲಕನಿಗೆ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದರು.
ಇಂದು ಪತ್ತೆಯಾಗಿರುವ 11 ಪ್ರಕರಣಗಳಲ್ಲಿ ನಿನ್ನೆ ಮೃತಪಟ್ಟ ವ್ಯಕ್ತಿಯ ಹೆಂಡತಿ ಮತ್ತು ಮಗನಿಗೆ ಸೋಂಕು ತಗುಲಿದ್ದು, ಉಳಿದವರು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 237 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 184 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 52 ಆ್ಯಕ್ಟೀವ್ ಕೇಸ್‌ಗಳಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.