ಅಥಣಿ(ಬೆಳಗಾವಿ):ಬಸವಕಲ್ಯಾಣದ ಪ್ರತಿಷ್ಠಿತ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ನಿರೀಕ್ಷೆಯಂತೆ ಬಹುಮತದಿಂದ ಗೆಲ್ಲಿಸಿದ ಬಸವಕಲ್ಯಾಣ ಕ್ಷೇತ್ರದ ಎಲ್ಲಾ ಮತದಾರರಿಗೂ, ಪಕ್ಷದ ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೂ ಡಿಸಿಎಂ ಲಕ್ಷ್ಮಣ್ ಸವದಿ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಸವಕಲ್ಯಾಣ ಕ್ಷೇತ್ರವು ಹಿಂದೆ ಕಾಂಗ್ರೆಸ್ ಹಿಡಿತದಲ್ಲಿತ್ತು. ಆದರೆ ಸಂಘಟನೆಯ ಬಲದಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಯ ಕಟ್ಟಿಟ್ಟ ಬುತ್ತಿ ಎಂಬುದು ಈ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಪಕ್ಷವು ನನ್ನ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿತ್ತು. ಈ ಉಸ್ತುವಾರಿ ಸಮಿತಿಯಲ್ಲಿದ್ದ ಸಚಿವ ಸಹೋದ್ಯೋಗಿಗಳಾದ ಬಸವರಾಜ ಬೊಮ್ಮಾಯಿ, ಸೋಮಣ್ಣ, ಪ್ರಭು ಚವಾಣ್, ಸ್ಥಳೀಯ ಸಂಸದರಾದ ಭಗವಂತ ಖುಬಾ ಮುಂತಾದವರು ಎಲ್ಲರೂ ಒಗ್ಗಟ್ಟಿನಿಂದ ನಿರಂತರವಾಗಿ ಶ್ರಮಿಸಿದ ಫಲಶ್ರುತಿಯಾಗಿ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷವು ಸೂಚಿಸುವ ಅಭ್ಯರ್ಥಿಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ನಾವು ಮನವಿ ಮಾಡಿಕೊಂಡಿದ್ದೆವು. ಇದಕ್ಕೆ ಸ್ಪಂದಿಸಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿರುವುದು ಈ ಚುನಾವಣೆಯ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರದ ಜನಪರ ಸಾಧನೆಗಳಿಗೆ ಈ ವಿಜಯವು ಕೈಗನ್ನಡಿಯಾಗಿದೆ ಎಂದು ಸವದಿ ಹೇಳಿದ್ದಾರೆ.
ಶರಣು ಸಲಗರ ಅವರಂತಹ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿಯು ಗುರುತಿಸಿ ಟಿಕೆಟ್ ಕೊಟ್ಟಿದ್ದನ್ನು ಮತದಾರರು ಮುಕ್ತ ಮನಸ್ಸಿನಿಂದ ಅನುಮೋದಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಈ ಗೆಲುವಿನಿಂದ ಮೈಮರೆಯದೆ ಮುಂದೆಯೂ ಸಾರ್ವಜನಿಕರ ಮತ್ತು ಭಾರತೀಯ ಜನತಾ ಪಕ್ಷದ ಹಿತ ಕಾಪಾಡಲು ಶರಣು ಅವರು ನಿರಂತರವಾಗಿ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಅಭೂತಪೂರ್ವ ಜಯಗಳಿಸಿರುವ ಶರಣು ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅವರನ್ನು ಗೆಲ್ಲಿಸಿರುವ ಮತದಾರ ಬಾಂಧವರಿಗೂ ಮತ್ತೊಮ್ಮೆ ವಂದನೆಗು ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.