ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಮಾತ್ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡುವ ಬಿಜೆಪಿ ಕೇಂದ್ರದಲ್ಲಿ ರಾಮ ಮಂದಿರ ಕನಸು ಹೊಂದಿದ್ದ ಎಲ್ ಕೆ ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ನಿರ್ಲಕ್ಷಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಪ್ರತಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಾರೆ. ಬಳಿಕ ಅದರ ಕುರಿತು ಮಾತೇ ತೆಗೆಯುವುದಿಲ್ಲ. ಇನ್ನು ರಾಮ ಮಂದಿರ ನಿರ್ಮಾಣದ ಕನಸು ಹೊತ್ತಿದ್ದ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ ಹಿರಿಯ ಬಿಜೆಪಿ ನಾಯಕರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಇಂತಹ ಸಮಯ ಸಾಧಕರನ್ನು ಬದಿಗೊತ್ತಿ ಮತ್ತೆ ಕಾಂಗ್ರೆಸ್ ಆಡಳಿತವನ್ನು ಅಸ್ತಿತ್ವಕ್ಕೆ ತರಬೇಕಿದೆ ಎಂದರು.
ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು ಬಡವರ ಪರವಾದ ಯೋಜನೆಗಳು ಜಾರಿಗೆ ಬಂದಿವೆ. ಮುಂದಿನ ಐದು ವರ್ಷ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಉತ್ತಮ ಆಡಳಿತ ನಡೆಸಲಿದೆ. ಕೇಂದ್ರದ ಕಳೆದ ಐದು ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಯನ್ನು ಹಿಂದಿಕ್ಕೆ ತಳ್ಳಿದೆ. ರಾಷ್ಟ್ರದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಜಿಎಸ್ಟಿ ಜಾರಿ, ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಉದ್ಯೋಗ ಸೃಷ್ಟಿಯಾಗಲಿಲ್ಲ. ರೈತರ ಸಾಲ ಮನ್ನಾ ಆಗಲಿಲ್ಲ. ಹದಿನೈದು ಲಕ್ಷ ಹಣ ಎಲ್ಲರ ಅಕೌಂಟ್ಗೆ ಹಾಕ್ತಿನಿ ಅಂದರು ಯಾರಿಗೆ ಬಂದಿದೆ.? ಎಂದು ಪ್ರಶ್ನೆ ಮಾಡಿದ ಡಿಕೆಶಿ ಮೋದಿ ಸರ್ಕಾರವು ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಇದನ್ನು ಜರನು ಅರ್ಥ ಮಾಡಿಕೊಂಡಿದ್ದಾರೆ ಎಂಬುವುದು ಈ ಚುನಾವಣೆಯಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ನಿಂತಿಲ್ಲ. ನಿಮ್ಮ ಶಿವಕುಮಾರ್, ಕುಮಾರಸ್ವಾಮಿ, ದೇವೇಗೌಡರು ನಿಂತಿದ್ದಾರೆ. ಅವರಿಗೆ ನೀವು ಮತ ನೀಡಬೇಕು. ಎಲ್ಲರೂ ಜೊತೆಗೂಡಿ ದೇಶದ ರಕ್ಷಣೆಗೆ ಹೋರಾಟ ಮಾಡ್ತಾ ಇದ್ದೇವೆ. ಇಲ್ಲಿ ಕೂಡ ಎಲ್ಲರೂ ಜೊತೆಗೂಡಿ ಬಿಜೆಪಿ ಸರ್ಕಾರವನ್ನು ಕಿತ್ತಾಕಿ ಕಾಂಗ್ರೆಸ್ ಆಡಳಿತವನ್ನು ಮತ್ತೆ ತರಬೇಕು ಎಂದರು.
ಇದೇ ವೇಳೆ ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್, ವಿಧಾನ ಪರಿಷತ್ತು ಸದಸ್ಯರ ರವಿ, ಮಾಜಿ ಶಾಸಕ ಮುನಿ ನರಸಿಂಹಯ್ಯ, ವೀರಪ್ಪಮೊಯ್ಲಿ ಮಗ ಹರ್ಷಮೊಯ್ಲಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.