ಬೆಂಗಳೂರು: ಮಳೆಗಾಲವನ್ನು ಎದುರಿಸಲು ಬೆಂಗಳೂರು ಸಿದ್ಧವಾಗುತ್ತಿದೆ. ಡಿಸಿಎಂ ಜಿ.ಪರಮೇಶ್ವರ್ ಈಗಾಗಲೇ 2 ಬಾರಿ ಸಭೆ ನಡೆಸಿ, ಬಿಬಿಎಂಪಿ ಕಮಿಷನರ್, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದರು.
ಮಳೆ ಬಂದರೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮವನ್ನು ಅನುಸರಿಸಬೇಕು. ಮಳೆ ಬಂದಾಗ ಹಲವು ಏರಿಯಾದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತೆ. ಈಗಾಗಲೇ ಮಳೆ ಬಂದರೆ ತುಂಬಾ ಸಮಸ್ಯೆಯಾಗುವ 182 ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಕೆಲಸಗಳು ನಡೆಯುತ್ತಿವೆ. ಮುಂಗಾರು ಮಳೆ ಜೂನ್ನಿಂದ ಪ್ರಾರಂಭವಾಗುತ್ತೆ ಎಂದು ಹೇಳಲಾಗಿದೆ. ಅಷ್ಟರಲ್ಲಿ ಕೆಲಸವನ್ನು ಮುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಮಗಾರಿಗಳ ಪರಿಶೀಲನೆ ನಡೆಸಿದ್ದೇನೆ. ಡಿಸಿಎಂ ಸಾಹೇಬ್ರು ಪರಿಶೀಲನೆ ಮಾಡುತ್ತಿದ್ದಾರೆ. ಮಳೆಗಾಲ ಆರಂಭವಾದರೆ ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಯಾವ ಏರಿಯಾದಲ್ಲಿ ಅತಿಹೆಚ್ಚು ಮಳೆ ಬೀಳುತ್ತೆ ಎಂದು ಗುರುತಿಸಲಾಗಿದೆ. ಸಮಸ್ಯೆ ಬಗೆಹರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಆಯಾ ವಾರ್ಡ್ನ ಕಾರ್ಪೋರೆಟರ್ಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬೀಳುವ ಹಂತದಲ್ಲಿರುವ ಕಂಪೌಂಡ್ ಗೋಡೆಗಳು ಹಾಗೂ ಕಟ್ಟಡಗಳನ್ನು ತೆರವುಗೊಳಿಸಲು ಈಗಾಗಲೇ 15 ದಿನಗಳ ಹಿಂದೆಯೇ ಸೂಚನೆ ಕೊಟ್ಟಿದ್ದೇನೆ. ವಿದ್ಯುತ್ ಲೈನ್ಗಳು ಹಾದು ಹೋಗಿರುವ ಕಡೆ ಎತ್ತರದ ಕಟ್ಟಡ ನಿರ್ಮಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದ್ದೇವೆ. ಆದಷ್ಟು ಬೇಗ ಎಲ್ಲಾ ಕೆಲಸ ಮುಗಿಯುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ.
ವಿಭೂತಿಪುರ ಮಠದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ :
ಕೆ.ಆರ್.ಪುರ ವಿಜ್ಞಾನ ನಗರ ವಾರ್ಡ್ನ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಜನ್ಮದಿನಾಚರಣೆ ಆಚರಿಸಲಾಯಿತು. ಈ ಪ್ರಯುಕ್ತ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು 150 ಪೌರ ಕಾರ್ಮಿಕರಿಗೆ ಗುರುರಕ್ಷಣೆ ಸಮಾರಂಭ ನೆರವೇರಿತು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮೀಜಿಗಳ ಜನ್ಮ ದಿನಾಚರಣೆಗೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ. ನಾವು ಬೆಂಗಳೂರಿನಲ್ಲಿ ಆರೋಗ್ಯವಾಗಿ ಓಡಾಡುತ್ತಿದ್ದೇವೆ ಎಂದರೆ ಅದಕ್ಕೆ ಪೌರಕಾರ್ಮಿಕರೆ ಕಾರಣ. ಅಂಥವರನ್ನು ಗುರುತಿಸಿ ವೀರಸಿಂಹಾಸನ ಸ್ವಾಮಿಜೀಗಳು ಗುರುರಕ್ಷಣೆ ಕಾರ್ಯಕ್ರಮವನ್ನು ಮಾಡಿರುವುದು ತುಂಬಾ ಒಳ್ಳೆಯ ಕೆಲಸ. ನಾನು ಈ ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ತಿಳಿಸಿದರು.