ಮಂಡ್ಯ: ಭಯೋತ್ಪಾದಕ ದಾಳಿಗೆ ಬಲಿಯಾದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ರಾಜ್ಯಾದ್ಯಂತ ಸಹಾಯಹಸ್ತ ಬರುತ್ತಿದೆ. ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಿಡಿದು ವಿದ್ಯಾರ್ಥಿಗಳು ಕೂಡ ಸಹಾಯಹಸ್ತ ಚಾಚಿದ್ದಾರೆ. ಇವರ ಸಾಲಿಗೆ ನಟ ಅಂಬಿ ಪತ್ನಿ ಸುಮಲತಾ ಕೂಡ ಸೇರ್ಪಡೆಯಾಗಿದ್ದಾರೆ.
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸುಮಲತಾರಿಂದ ಕೃಷಿ ಭೂಮಿ ನೆರವು! - ಹುತಾತ್ಮ ಯೋಧ ಗುರು
ಭಯೋತ್ಪಾದಕ ದಾಳಿಗೆ ಬಲಿಯಾದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ನಟ ಅಂಬಿ ಪತ್ನಿ ಸುಮಲತಾ ಕೃಷಿ ಭೂಮಿಯನ್ನು ಕೊಡಲು ಮುಂದಾಗಿದ್ದಾರೆ.
ಹೌದು, ಅಂಬರೀಶ್‌ಗೆ ಪಿತ್ರಾರ್ಜಿತವಾಗಿ ಬಂದಿದ್ದ ಕೃಷಿ ಭೂಮಿಯನ್ನು ಯೋಧನ ಕುಟುಂಬಕ್ಕೆ ಸುಮಲತಾ ನೀಡುತ್ತಿದ್ದಾರೆ. ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ನಟ ಅಂಬರೀಶ್‌ರ ಪಿತ್ರಾರ್ಜಿತ ಕೃಷಿ ಭೂಮಿ ಇದೆ. ಒಂದು ಕಡೆ ಆರೂವರೆ ಎಕರೆ, ಮತ್ತೊಂದು ಕಡೆ ಎರಡು ಎಕರೆ ಭೂಮಿ ಇದ್ದು, ಭತ್ತ ಹಾಗೂ ಕಬ್ಬಿನ ಬೆಳೆಯನ್ನು ಬೆಳೆಯಲಾಗುತ್ತಿದೆ.
ಎಲ್ಲಾ ಭೂಮಿಯಲ್ಲಿ ಸ್ಥಳೀಯ ರೈತರೇ ವ್ಯವಸಾಯ ಮಾಡುತ್ತಿದ್ದಾರೆ. ಎರಡೂ ಭೂಮಿಗೆ ಉತ್ತಮವಾದ ನೀರಿನ ಸೌಲಭ್ಯವಿದೆ. ನೀರಾವರಿ ಜಮೀನು ಆಗಿರುವ ಈ ಭೂಮಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಈ ಭೂಮಿ ಗುಡಿಗೆರೆ ಕಾಲೋನಿಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿದ್ದು, ಉತ್ತಮ ರಸ್ತೆ ಮಾರ್ಗವೂ ಇದೆ. ಇಂತಹ ಬೆಲೆ ಬಾಳುವ ಕೃಷಿ ಭೂಮಿಯನ್ನು ಸುಮಲತಾ ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೀಡುತ್ತಿದ್ದಾರೆ. ಎರಡು ವರ್ಷದ ಹಿಂದೆಯಷ್ಟೇ ಅಭಿಷೇಕ್ ಹೆಸರಿಗೆ ಪಹಣಿಯನ್ನು ಮಾಡಿಸಲಾಗಿತ್ತು. ಈಗ ಈ ಭೂಮಿಯಲ್ಲಿ ಅರ್ಧ ಎಕರೆ ಭೂಮಿ ಯೋಧನ ಕುಟುಂಬಕ್ಕೆ ಹಸ್ತಾಂತರ ಆಗಲಿದೆ.