ವಾರಣಾಸಿ(ಉತ್ತರ ಪ್ರದೇಶ):ಕೊರೊನಾದಿಂದಾಗಿ ದೇಶದಲ್ಲಿ ಪ್ರತಿದಿನ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಇವರ ಪೈಕಿ ಕೆಲವರು ಆಸ್ಪತ್ರೆ, ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಿವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಪ್ರಧಾನಿ ಮೋದಿಯವರು ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಇಂಥದ್ದೇ ಘಟನೆ ನಡೆದಿದೆ.
ದಮಜೌನ್‌ಪುರದ ಮಡಿಹು ನಿವಾಸಿಯಾದ ಮಹಿಳೆಯೊಬ್ಬರು ತನ್ನ ಪುತ್ರನ ಶವವನ್ನು ಆಟೋದಲ್ಲಿರಿಸಿ ಕೊಂಡೊಯ್ಯುತ್ತಿರುವ ಫೋಟೋ ಇದಾಗಿದೆ. ಯುವಕನ ಮೃತದೇಹದ ತಲೆಯ ಭಾಗ ಹೊರಗಡೆ ಕಾಣಿಸುತ್ತಿದೆ. ತಲೆ ತಾಯಿಯ ಕಾಲ ಬುಡದಲ್ಲಿದೆ.
ಘಟನೆಯ ವಿವರ
ಮೃತಪಟ್ಟ ಯುವಕ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನಂತೆ. ಡಿಸೆಂಬರ್‌ನಲ್ಲಿ ವಿವಾಹ ಸಮಾರಂಭಕ್ಕೆಂದು ಊರಿಗೆ ಬಂದಾತ ಅಲ್ಲಿಯೇ ಇದ್ದ. ಇತ್ತೀಚೆಗೆ ಆತನ ಆರೋಗ್ಯ ಹದಗೆಟ್ಟಿದೆ. ಕುಟುಂಬ ಸದಸ್ಯರು ಯುವಕನನ್ನು ಜಾನ್‌ಪುರದ ವೈದ್ಯರ ಬಳಿ ಕರೆದೊಯ್ದಾಗ ಮೂತ್ರಪಿಂಡದ ಸಮಸ್ಯೆಯಿದೆ ಎಂದು ವೈದ್ಯರು ಹೇಳಿದ್ದಾರಂತೆ.
ಇದನ್ನೂ ಓದಿ: ಆಸ್ಪತ್ರೆ ಹೊರಗೆ ಸೋಂಕಿತರನ್ನು ಕರೆತಂದ ಆ್ಯಂಬುಲೆನ್ಸ್ಗಳ ಸಾಲು- ವಿಡಿಯೋ
ಸೋಮವಾರ ತನ್ನ ತಾಯಿಯ ಜತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದಾನೆ. ಈ ವೇಳೆ ಯುವಕ ತೀವ್ರ ಅನಾರೋಗ್ಯ ಮತ್ತು ನಿಶ್ಶಕ್ತಿಯಿಂದ ಬಳಲುತ್ತಿದ್ದ. ಆದರೆ ಕೊರೊನಾ ಆತಂಕದಿಂದ ವೈದ್ಯರು ಯುವಕನಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ. ಬಳಿಕ ಕಾಕ್ರಮಟ್ಟದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ಯುವಕನನ್ನು ಚಿಕಿತ್ಸೆಗೆ ದಾಖಲಿಸಿಕೊಂಡಿಲ್ಲ. ಮೊದಲೇ ಅನಾರೋಗ್ಯ ಪೀಡಿತನಾಗಿದ್ದ ಯುವಕ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಪ್ರಾಣ ಬಿಟ್ಟಿದ್ದಾನೆ. ಮಗನ ಮೃತದೇಹವನ್ನು ತಾಯಿಯು ಆ್ಯಂಬುಲೆನ್ಸ್ ಸಿಗದೆ ಇ-ರಿಕ್ಷಾದಲ್ಲಿಟ್ಟುಕೊಂಡು ಕುಳಿತಿರುವ ಫೋಟೋ ಮನಕಲಕುವಂತಿದೆ.