ಕರ್ನಾಟಕ

karnataka

ETV Bharat / bharat

37 ವರ್ಷದ ನಂತರ ಸತತ 2ನೇ ಅವಧಿಗೆ ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಐತಿಹಾಸಿಕ ಪದಗ್ರಹಣ - ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಯೋಗಿ ಆದಿತ್ಯನಾಥ್ ಅನೇಕ ದಾಖಲೆ ನಿರ್ಮಿಸಿದ್ದಾರೆ.

Yogi Adityanath takes oath
Yogi Adityanath takes oath

By

Published : Mar 25, 2022, 5:02 PM IST

ಲಖನೌ(ಉತ್ತರ ಪ್ರದೇಶ):ಯೋಗಿ ಆದಿತ್ಯನಾಥ್​ ಸತತ ಎರಡನೇ ಬಾರಿಗೆ ಉತ್ತರಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಅನೇಕ ಪ್ರಥಮಗಳನ್ನು ಸಾಧಿಸಿದರು. ಇದೇ ವೇಳೆ, ಇದುವರೆಗೂ ಇದ್ದ ಹಲವು ನಂಬಿಕೆಗಳಿಗೆ ತಿಲಾಂಜಲಿಯನ್ನೂ ಇಟ್ಟರು. 37 ವರ್ಷಗಳ ನಂತರ ಪ್ರಚಂಡ ಬಹುಮತದೊಂದಿಗೆ ಯುಪಿಯಲ್ಲಿ ಅಧಿಕಾರಕ್ಕೆ ಮರಳಿದ ಮೊದಲ ಮುಖ್ಯಮಂತ್ರಿಯಾಗಿ ಯೋಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ, ರಾಜ್ಯದ 22ನೇ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದರು.

ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ಅದ್ಧೂರಿಯಾಗಿ, ಅಪಾರ ಜನಸ್ತೋಮದ ನಡುವೆ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್​ ಅವರಿಗೆ ರಾಜ್ಯಪಾಲೆ ಆನಂದಿ ಬೆನ್ ಅಧಿಕಾರದ ಗೋಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಇದರ ಬೆನ್ನಲ್ಲೇ ಡೆಪ್ಯೂಟಿ ಸಿಎಂಗಳಾಗಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್​ ಪಾಟಕ್​ ಪ್ರಮಾಣ ವಚನ ಸ್ವೀಕರಿಸಿದರು. ಚುನಾವಣೆಯಲ್ಲಿ ಸೋಲು ಕಂಡಿರುವ ಕೇಶವ್​ ಪ್ರಸಾದ್​ಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು ಇಲ್ಲಿ ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಿಂದ ಆಯ್ಕೆಯಾಗಿರುವ ಮೂವರು ಶಾಸಕರಿಗೆ ಸಚಿವಗಿರಿ ನೀಡಲಾಗಿದೆ. ಒಟ್ಟು 47 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಐದು ಸಲ ಲೋಕಸಭೆ ಸಂಸದರಾಗಿ ಗೋರಖ್​ಪುರ ಕ್ಷೇತ್ರ ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್​ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಬಯಸಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ತಮ್ಮ ಎದುರಾಳಿ ವಿರುದ್ಧ 1,02,399 ಮತಗಳ ಅಂತರದಿಂದ ಜಯ ಸಾಧಿಸಿದ ಯೋಗಿ ಇತಿಹಾಸ ಸೃಷ್ಟಿಸಿದ್ದರು.

ಇದನ್ನೂ ಓದಿ:ಬಿಜೆಪಿ ಭದ್ರಕೋಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಯೋಗಿ ಆದಿತ್ಯನಾಥ್‌ಗೆ ಗೆಲುವು

ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್ ಧಾಮಿ ಸೇರಿದಂತೆ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ 85 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.

ಕಳೆದ 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಉತ್ತರ ಪ್ರದೇಶ 21 ಸಿಎಂಗಳನ್ನು ಕಂಡಿದೆ. ಆದರೆ, ಕೇವಲ ಮೂವರು ಮಾತ್ರ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಬಿಎಸ್​ಪಿ ನಾಯಕಿ ಮಾಯಾವತಿ 2007-2012ರಲ್ಲಿ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 2012-2017ರ ಅವಧಿಯಲ್ಲಿ ಅಧಿಕಾರ ಸಂಪೂರ್ಣಗೊಳಿಸಿದ್ದರು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಪೂರ್ಣಾವಧಿ ಮುಗಿಸಿದ 3ನೇ ಮುಖ್ಯಮಂತ್ರಿಯಾಗಲಿದ್ದಾರೆ.

ABOUT THE AUTHOR

...view details