ಹೈದರಾಬಾದ್:ಎರಡನೇ ಮಹಾಯುದ್ಧವು 1939 ರಿಂದ 1945 ರವರೆಗೆ ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇದರಲ್ಲಿ ಸುಮಾರು 70 ದೇಶಗಳ ಸೇನೆಗಳು ಭಾಗಿಯಾಗಿದ್ದವು. ಈ ಯುದ್ಧದಲ್ಲಿ ಜಗತ್ತನ್ನು ಮಿತ್ರರಾಷ್ಟ್ರಗಳು ಮತ್ತು ಶತ್ರುರಾಷ್ಟ್ರಗಳನ್ನಾಗಿ ವಿಭಜಿಸಲಾಗಿತ್ತು. ವಿವಿಧ ರಾಷ್ಟ್ರಗಳ ಸುಮಾರು 100 ಮಿಲಿಯನ್ ಸೈನಿಕರು ಯುದ್ಧದಲ್ಲಿ ಭಾಗವಹಿಸಿದ್ದರು.
ಶತ್ರು ರಾಷ್ಟ್ರಗಳು
ಜರ್ಮನಿ, ಜಪಾನ್ ಮತ್ತು ಇಟಲಿಗಳು ‘ಆಕ್ಸಿಸ್ ಪವರ್ಸ್’ ಎಂದು ಕರೆಯಲ್ಪಡುವ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು, ಇದರಲ್ಲಿ ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಎರಡು ಜರ್ಮನ್ ನಿರ್ಮಿತ ರಾಜ್ಯಗಳಾದ ಕ್ರೊಯೇಷಿಯಾ ಮತ್ತು ಸ್ಲೋವಾಕಿಯಾ ಕೂಡ ಸೇರಿವೆ.
ಜರ್ಮನಿಯ ಅಡಾಲ್ಫ್ ಹಿಟ್ಲರ್, ಡೆರ್ ಫ್ಯೂರರ್, ಜಪಾನ್ ಪ್ರಧಾನಿ ಅಡ್ಮಿರಲ್ ಹಿಡೆಕಿ ಟೋಜೊ ಮತ್ತು ಇಟಲಿಯ ಪ್ರಧಾನಿ ಬೆನಿಟೊ ಮುಸೊಲಿನಿ ಈ ಬಣದ ಪ್ರಮುಖ ನಾಯಕರಾಗಿದ್ದರು.
ಮಿತ್ರ ರಾಷ್ಟ್ರಗಳು
ಅಮೆರಿಕ, ಬ್ರಿಟನ್, ಫ್ರಾನ್ಸ್ ಹಾಗೂ ಸೋವಿಯತ್ ಒಕ್ಕೂಟಗಳನ್ನೊಳಗೊಂಡ ರಾಷ್ಟ್ರಗಳಿಗೆ ಮಿತ್ರ ರಾಷ್ಟ್ರ ಎಂದು ಕರೆಯಲಾಗಿದೆ . ಮುಂದಿನ ದಿನಗಳಲ್ಲಿ ಈ ಕೂಟಕ್ಕೆ(1939 -1944 ರ ಅವಧಿಯಲ್ಲಿ) ಸುಮಾರು 50 ರಾಷ್ಟ್ರಗಳು ಸೇರ್ಪಡೆಗೊಂಡವು.
ಇದರ ಜೊತೆಗೆ, 1945 ರ ವೇಳೆಗೆ ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರೆಜಿಲ್, ಬ್ರಿಟಿಷ್ ಕಾಮನ್ವೆಲ್ತ್ ರಾಷ್ಟ್ರಗಳು, ಕೆನಡಾ, ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಜೆಕೊಸ್ಲೊವಾಕಿಯಾ, ಡೆನ್ಮಾರ್ಕ್, ಫ್ರಾನ್ಸ್, ಗ್ರೀಸ್, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಫಿಲಿಪೈನ್ಸ್ ಸೇರಿದಂತೆ ಇನ್ನೂ ಹದಿಮೂರು ರಾಷ್ಟ್ರಗಳು ಸೇರಿಕೊಂಡವು.
ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್, ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಒಕ್ಕೂಟದ ಜನರಲ್ ಜೋಸೆಫ್ ಸ್ಟಾಲಿನ್ ಈ ಬಣದ ಪ್ರಮುಖ ನಾಯಕರು
ಎರಡನೇಯ ಮಹಾಯುದ್ಧದ ಸಾವು - ನೋವುಗಳು
ಎರಡನೇ ಮಹಾಯುದ್ಧವು ಇತಿಹಾಸದಲ್ಲಿ ಅತ್ಯಂತ ಮಾರಕ ಅಂತಾರಾಷ್ಟ್ರೀಯ ಸಂಘರ್ಷವಾಗಿತ್ತು. ಈ ಸಮಯದಲ್ಲಿ ಅಂದಾಜು ಆರು ಮಿಲಿಯನ್ ಯಹೂದಿಗಳನ್ನು ನಾಜಿಗಳು ಕೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯುದ್ಧದಲ್ಲಿ ಅಂದಾಜು 50 ರಿಂದ 55 ಮಿಲಿಯನ್ ಜನರು ಹಾಗೂ 21 ರಿಂದ 25 ಮಿಲಿಯನ್ ಯೋಧರು ಮೃತಪಟ್ಟರು. ಲಕ್ಷಾಂತರ ಜನರು ಗಾಯಗೊಂಡರು.
ವಿವಿಧ ದೇಶಗಳ ಸೈನಿಕರ ಸಾವು - ನೋವುಗಳು -1939 ರಿಂದ 1945
- ಸೋವಿಯತ್ ಒಕ್ಕೂಟ: ಸಾವು- 7,500,000, ಗಾಯಾಳುಗಳ ಸಂಖ್ಯೆ 5,000,000
- ಅಮೆರಿಕ:ಸಾವು 405,399, ಗಾಯಾಳುಗಳ ಸಂಖ್ಯೆ 670,846
- ಆಸ್ಟ್ರೇಲಿಯಾ: ಸಾವು 23,365, ಗಾಯಾಳುಗಳ ಸಂಖ್ಯೆ 39,803
- ಆಸ್ಟ್ರಿಯಾ: ಸಾವು 380,000, ಗಾಯಾಳುಗಳ ಸಂಖ್ಯೆ 350,117
- ಬೆಲ್ಜಿಯಂ:ಸಾವು 7,760, ಗಾಯಾಳುಗಳ ಸಂಖ್ಯೆ 14,500
- ಬಲ್ಗೇರಿಯಾ: ಸಾವು 10,000, ಗಾಯಾಳುಗಳ ಸಂಖ್ಯೆ 21,878
- ಕೆನಡಾ: ಸಾವು 37,476, ಗಾಯಾಳುಗಳ ಸಂಖ್ಯೆ 53,174
- ಚೀನಾ:ಸಾವು 2,200,000, ಗಾಯಾಳುಗಳ ಸಂಖ್ಯೆ 1,762,000
- ಫ್ರಾನ್ಸ್: ಸಾವು 210,671, ಗಾಯಾಳುಗಳ ಸಂಖ್ಯೆ 390,000
- ಜರ್ಮನಿ: ಸಾವು 3,500,000, ಗಾಯಾಳುಗಳ ಸಂಖ್ಯೆ 7,250,000
- ಬ್ರಿಟನ್: ಸಾವು 329,208, ಗಾಯಾಳುಗಳ ಸಂಖ್ಯೆ 348,403
- ಹಂಗೇರಿ: 140,000 ಸಾವು, ಗಾಯಾಳುಗಳ ಸಂಖ್ಯೆ 89,313
- ಇಟಲಿ: ಸಾವು 77,494, ಗಾಯಾಳುಗಳ ಸಂಖ್ಯೆ 120,000
- ಜಪಾನ್: ಸಾವು 1,219,000 , ಗಾಯಾಳುಗಳ ಸಂಖ್ಯೆ 295,247
- ಪೋಲೆಂಡ್: ಸಾವು 320,000 , ಗಾಯಾಳುಗಳ ಸಂಖ್ಯೆ 530,000
- ರೊಮೇನಿಯಾ: ಸಾವು 300,000, ಗಾಯಗೊಂಡವರ ಸಂಖ್ಯೆ ತಿಳಿದಿಲ್ಲ
ಎರಡನೇ ಮಹಾಯುದ್ಧದ ಪ್ರಮುಖಾಂಶಗಳು
ಮಿತ್ರರಾಷ್ಟ್ರ ಮತ್ತು ಆಕ್ಸಿಸ್ ರಾಷ್ಟ್ರಗಳ ಸಶಸ್ತ್ರ ಪಡೆಗಳಲ್ಲಿ ಸುಮಾರು 70 ಮಿಲಿಯನ್ ಜನರು ಹೋರಾಡಿದರು. ಫಿನ್ಲ್ಯಾಂಡ್ ಅಧಿಕೃತವಾಗಿ ಮಿತ್ರರಾಷ್ಟ್ರಗಳು ಅಥವಾ ಆಕ್ಸಿಸ್ ಬ್ಲಾಕ್‌ಗೆ ಸೇರಲಿಲ್ಲ.
1940ರಲ್ಲಿ ಸಹಾಯದ ಅಗತ್ಯವಿದ್ದಾಗ, ಸೋವಿಯತ್ ಒಕ್ಕೂಟವನ್ನು ಹಿಮ್ಮೆಟ್ಟಿಸಲು ಫಿನ್ಲ್ಯಾಂಡ್ ನಾಜಿ ಜರ್ಮನಿಯೊಂದಿಗೆ ಸೇರಿಕೊಂಡಿತು. 1944ರಲ್ಲಿ ಫಿನ್ ಲ್ಯಾಂಡ್ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶಾಂತಿ ಒಪ್ಪಂದವಾದಾಗ, ಫಿನ್ಲ್ಯಾಂಡ್ ಸೋವಿಯತ್ ಒಕ್ಕೂಟವನ್ನು ಸೇರಿಕೊಂಡು ಜರ್ಮನ್ ವಿರುದ್ಧ ಹೋರಾಡಿತು.
ಯುದ್ಧದ ಸಮಯದಲ್ಲಿ ಸ್ವಿಟ್ಜರ್ಲೆಂಡ್, ಸ್ಪೇನ್, ಪೋರ್ಚುಗಲ್ ಮತ್ತು ಸ್ವೀಡನ್ ರಾಷ್ಟ್ರಗಳು ತಟಸ್ಥವಾಗಿದ್ದವು. ಯುದ್ಧದ ಭೀಕರತೆ ಎಷ್ಟಿತ್ತೆಂದರೆ ಸೋವಿಯತ್ ಒಕ್ಕೂಟವು ತನ್ನ ಏಳು ಮಿಲಿಯನ್ ಸೈನಿಕರನ್ನು ಕಳೆದುಕೊಂಡಿತು.
ಎರಡನೇ ಮಹಾಯುದ್ಧದಲ್ಲಿ ನಾಗರಿಕ ಸಾವು- ನೋವುಗಳ ಸಂಖ್ಯೆ ಎಂದಿಗೂ ತಿಳಿದಿಲ್ಲದಿರಬಹುದು. ಈ ಸಮಯದಲ್ಲಿ ಹಸಿವು, ನರಮೇಧ, ಸರಣಿ ಬಾಂಬ್ ಸ್ಫೋಟಗಳಿಂದಲೂ ಹೆಚ್ಚಿನ ಸಾವು - ನೋವುಗಳು ಸಂಭವಿಸಿದವು. ಯುದ್ಧದ ಸಮಯದಲ್ಲಿ ಸುಮಾರು ಆರು ಮಿಲಿಯನ್ ಯಹೂದಿಗಳನ್ನು ನಾಜಿ ಪಡೆ ಕೊಂದಿದೆ ಎನ್ನಲಾಗಿದೆ.
ಲೆಂಡ್ - ಲೀಸ್ ಆಕ್ಟ್ ಜಾರಿಗೆ
ಶತ್ರುರಾಷ್ಟ್ರಗಳ ವಿರುದ್ಧ ಹೋರಾಡುವ ಯಾವುದೇ ದೇಶಕ್ಕೆ ಶಸ್ತ್ರಾಸ್ತ್ರಗಳು, ಸಲಕರಣೆಗಳು ಅಥವಾ ಕಚ್ಚಾ ವಸ್ತುಗಳನ್ನು ಸಾಲ ನೀಡಲು ಅಮೆರಿಕ ಲೆಂಡ್-ಲೀಸ್ ಆಕ್ಟ್ ಅನ್ನು ಜಾರಿಗೆ ತಂದಿತು. ಈ ಕಾಯ್ದೆ ಜಾರಿ ಬಳಿಕ 38 ರಾಷ್ಟ್ರಗಳು ಅಮೆರಿಕದಿಂದ 50 ಬಿಲಿಯನ್ ಸಾಲ ಪಡೆದವು.
1948 ರಲ್ಲಿ ಅಮೆರಿಕ, ಯುದ್ಧ - ಹಾನಿಗೊಳಗಾದ ಯುರೋಪ್ ಅನ್ನು ಪುನರ್ನಿರ್ಮಾಣ ಮಾಡಲು ಮಾರ್ಷಲ್ ಯೋಜನೆಯನ್ನು ರಚಿಸಿತು. ಇದರಡಿ, 18 ದೇಶಗಳು13 ಬಿಲಿಯನ್ ಡಾಲರ್ ಮೊತ್ತದ ಆಹಾರ, ಯಂತ್ರೋಪಕರಣಗಳು ಮತ್ತು ಇತರ ಸರಕುಗಳನ್ನು ಪಡೆದುಕೊಂಡವು.
ಎರಡನೇ ಮಹಾಯುದ್ಧದ ಸಂಕ್ಷಿಪ್ತ ಘಟನೆಗಳು
ಸೆಪ್ಟೆಂಬರ್ 1, 1939 - ಪೋಲೆಂಡ್ ಮೇಲೆ ಜರ್ಮನಿ ದಾಳಿ. ಡೆನ್ಮಾರ್ಕ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಬೆಲ್ಜಿಯಂ ಮತ್ತು ಫ್ರಾನ್ಸ್ ಶೀಘ್ರದಲ್ಲೇ ಜರ್ಮನ್ ನಿಯಂತ್ರಣಕ್ಕೆ ಬಂದವು.
ಜೂನ್ 10, 1940 - ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಯುದ್ಧ ಘೋಷಿಸುವ ಮೂಲಕ ಇಟಲಿ ಜರ್ಮನಿಯ ಬಣ ಸೇರಿತು. ಈ ಮಧ್ಯೆ ಹೋರಾಟವು ಗ್ರೀಸ್ ಮತ್ತು ಉತ್ತರ ಆಫ್ರಿಕಾಕ್ಕೆ ಹರಡಿತು.
ಜೂನ್ 14, 1940 - ಜರ್ಮನ್ ಪಡೆಗಳು ಪ್ಯಾರಿಸ್‌ಗೆ ತೆರಳಿದವು.
ಜುಲೈ 1940 ರಿಂದ ಸೆಪ್ಟೆಂಬರ್ 1940 - ಜರ್ಮನಿ ಮತ್ತು ಬ್ರಿಟನ್ ಆಂಗ್ಲ ಕರಾವಳಿಯಲ್ಲಿ ವೈಮಾನಿಕ ಯುದ್ಧ
ಸೆಪ್ಟೆಂಬರ್ 7, 1940 ರಿಂದ ಮೇ 1941 - ಲಂಡನ್ ಮೇಲೆ ವಾಯುದಾಳಿಗೆ ಪ್ರತಿಕ್ರಿಯೆಯಾಗಿ, ಜರ್ಮನ್ನರು ಬ್ಲಿಟ್ಜ್ ಬಾಂಬ್ ದಾಳಿ ನಡೆಸಿದರು.
ಜೂನ್ 22, 1941 - ಜರ್ಮನಿ ಸೋವಿಯತ್ ಒಕ್ಕೂಟವನ್ನು ಆಕ್ರಮಿಸಿತು.