ಗಾಂಧಿನಗರ (ಗುಜರಾತ್): ಜಾಗತಿಕ ಅನೇಕ ಅನಿಶ್ಚಿತತೆಗಳ ನಡುವೆಯೂ ಭಾರತವು ಭರವಸೆಯ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ. ಜಾಗತಿಕ ಆರ್ಥಿಕತೆಯ ಸ್ಥಿರತೆಯ ಪ್ರಮುಖ ಸ್ತಂಭ, ವಿಶ್ವಾಸಾರ್ಹ ಸ್ನೇಹಿತ ಮತ್ತು ಬೆಳವಣಿಗೆಯ ಎಂಜಿನ್ ಆಗಿ ಭಾರತವನ್ನು ಜಗತ್ತು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗಾಂಧಿನಗರದಲ್ಲಿ ಬುಧವಾರ ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಶೀಘ್ರವಾಗಿ ಬದಲಾಗುತ್ತಿರುವ ಜಗತ್ತಿನ ಕ್ರಮದಲ್ಲಿ ಭಾರತವು ವಿಶ್ವ ಮಿತ್ರನಾಗಿ ಮುನ್ನಡೆಯುತ್ತಿದೆ. ನಾವು ಸಾಮಾನ್ಯ ಗುರಿಗಳನ್ನು ನಿರ್ಧರಿಸಬಹುದು ಮತ್ತು ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನೂ ಭಾರತವು ಜಗತ್ತಿಗೆ ನೀಡಿದೆ ಎಂದು ತಿಳಿಸಿದರು.
ಇಂದು ಜಗತ್ತು ಭಾರತವನ್ನು ಸ್ಥಿರತೆಯ ಪ್ರಮುಖ ಆಧಾರಸ್ತಂಭವಾಗಿ ನೋಡುತ್ತದೆ. ವಿಶ್ವಾಸಾರ್ಹ ಸ್ನೇಹಿತ, ಜನಕೇಂದ್ರಿತ ಅಭಿವೃದ್ಧಿಯಲ್ಲಿ ನಂಬಿಕೆಯಿರುವ ಪಾಲುದಾರ, ಜಾಗತಿಕ ಒಳಿತನ್ನು ನಂಬುವ ಧ್ವನಿ, ಜಾಗತಿಕ ದಕ್ಷಿಣದ ಧ್ವನಿ, ಬೆಳವಣಿಗೆಯ ಎಂಜಿನ್ ಆಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಪರಿಹಾರಗಳನ್ನು ಹುಡುಕುವ ತಂತ್ರಜ್ಞಾನದ ಕೇಂದ್ರ ಮತ್ತು ಪ್ರತಿಭಾವಂತ ಯುವಕರ ಶಕ್ತಿ ಕೇಂದ್ರವೂ ಆಗಿದೆ ಎಂದು ಪ್ರಧಾನಿ ವಿವರಿಸಿದರು. ಇದೇ ವೇಳೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರು ದೊಡ್ಡ ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಎಲ್ಲ ಪ್ರಮುಖ ರೇಟಿಂಗ್ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ದೇಶವು ಇದನ್ನು ಸಾಧಿಸುತ್ತದೆ ಎಂಬುದು ಆ ಸಂಸ್ಥೆಗಳಿಗೂ ಗ್ಯಾರಂಟಿಯಾಗಿದೆ ಎಂದು ಮೋದಿ ಹೇಳಿದರು.
ಗುಜರಾತ್‌ನಲ್ಲಿ ₹ 2 ಲಕ್ಷ ಕೋಟಿ ಹೂಡಿಕೆ - ಅದಾನಿ: ಮತ್ತೊಂದೆಡೆ, ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿರುವ ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ, ವಿಶ್ವದ ಅತಿದೊಡ್ಡ ಶುದ್ಧ ಇಂಧನ ಯೋಜನೆಯನ್ನು ಸ್ಥಾಪಿಸಲಾಗುವುದು. ಇದು ಬಾಹ್ಯಾಕಾಶದಿಂದ ನೋಡಿದರೂ ಕಣ್ಣಿಗೆ ಗೋಚರಿಸುವಂತಿರುತ್ತದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್ ಗುಜರಾತ್‌ನಲ್ಲಿ 2 ಲಕ್ಷ ರೂ. ಕೋಟಿ ಹೂಡಿಕೆ ಮಾಡಲಿದೆ. ಇದರಿಂದ 1 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಚ್‌ನ ಖಾವ್ಡಾದಲ್ಲಿ ವಿಶ್ವದ ಅತಿದೊಡ್ಡ ಶುದ್ಧ ಇಂಧನ ಪಾರ್ಕ್ ನಿರ್ಮಿಸಲಾಗುತ್ತದೆ. 725 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ 30 ಗಿಗಾ ವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾಸಲಾಗುವುದು. ಇದು ಬಾಹ್ಯಾಕಾಶದಿಂದ ಕೂಡ ಗೋಚರಿಸುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿಸಿದ ಅವರು, 2014ರಿಂದ ಭಾರತದ ಜಿಡಿಪಿ ಶೇ.185ರಷ್ಟು ಮತ್ತು ತಲಾ ಆದಾಯವು ಶೇ.165ರಷ್ಟು ಬೆಳೆದಿದೆ. ಈ ದಶಕದ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತು ಸಾಂಕ್ರಾಮಿಕ ರೋಗದ ಸವಾಲಿನ ನಡುವೆಯೂ ಇದು ಅಪ್ರತಿಮವಾದ ಸಾಧನೆ. ಅಲ್ಲದೇ, ನೀವು (ಮೋದಿ) ನಮ್ಮನ್ನು ಜಾಗತಿಕ ವೇದಿಕೆಗಳಲ್ಲಿ ಧ್ವನಿ ಹುಡುಕುವ ದೇಶದಿಂದ, ಈಗ ಜಾಗತಿಕ ವೇದಿಕೆಗಳನ್ನು ರಚಿಸುವ ರಾಷ್ಟ್ರಕ್ಕೆ ಕರೆದೊಯ್ದಿದ್ದೀರಿ. ನೀವು ಭವಿಷ್ಯವನ್ನು ಊಹಿಸುವುದಿಲ್ಲ. ನೀವು ಅದನ್ನು ರೂಪಿಸುತ್ತೀರಿ ಎಂದರು.
ಇದನ್ನೂ ಓದಿ:2047ರ ವೇಳೆಗೆ ಭಾರತದ ಆರ್ಥಿಕತೆ 35 ಟ್ರಿಲಿಯನ್ ಡಾಲರ್ಗೆ ತಲುಪಲಿದೆ: ಅಂಬಾನಿ ಭವಿಷ್ಯ