ಪಠಾಣ್ಕೋಟ್ (ಪಂಜಾಬ್) :ಹೆರಿಗೆಗಾಗಿ ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೇ ವೈದ್ಯರು ಬೇರೆ ಆಸ್ಪತ್ರೆಗೆ ಸೂಚಿಸಿದ್ದರಿಂದ ದಾರಿ ಮಧ್ಯೆಯೇ ಆಟೋ ರಿಕ್ಷಾದಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಪಠಾಣ್ಕೋಟ್ ಆಸ್ಪತ್ರೆ ಸುದ್ದಿಯಾಗಿದೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆರಿಗೆಗಾಗಿ ಅಮೃತಸರದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಹೀಗಾಗಿ ವಾಪಸ್ ಹೋಗುವಾಗ ಮಹಿಳೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರಕರಣವನ್ನು ಸಂಪೂರ್ಣವಾಗಿ ವಿಚಾರಣೆ ನಡೆಸುವಂತೆ ಸಿವಿಲ್ ಸರ್ಜನ್ ಆದೇಶಿಸಿದ್ದಾರೆ.
ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ : ಸ್ಥಳೀಯ ನಿವಾಸಿಯ ಪ್ರಕಾರ,
’’ಹೆರಿಗೆಗಾಗಿ ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಲ್ಲಿನ ವೈದ್ಯರು ಆಸ್ಪತ್ರೆಗೆ ಸೇರಿಸಿಕೊಳ್ಳದೇ ಅಮೃತಸರದ ಆಸ್ಪತ್ರೆಗೆ ಸೂಚಿಸಿದ್ದಾರೆ. ಆದರೆ ಕುಟುಂಬಸ್ಥರು ಬಡವರಾದ್ದರಿಂದ ಮಹಿಳೆಯನ್ನು ಬೇರೆ ಯಾವುದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಪುನಃ ಆಟೋದ ಮೂಲಕ ಮರಳಿ ಮನೆಗೆ ಕರೆತಂದಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ಮಹಿಳೆಗೆ ಹೆರಿಗೆಯಾಗಿದೆ. ಹೀಗಾಗಿ ಇದೀಗ ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ವಾಪಸ್ ಕಳುಹಿಸಿದ್ದಕ್ಕೆ ಸರ್ಕಾರಿ ಆಸ್ಪತ್ರೆಯ ಆಡಳಿತದ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ ಸಿವಿಲ್ ಸರ್ಜನ್ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ’’