ಪಶ್ಚಿಮ ಚಂಪಾರಣ್(ಬಿಹಾರ):ಬಿಹಾರದಲ್ಲಿ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿದ್ದ ಕಾಮುಕನೋರ್ವ ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತ ಮಾಡಿಸಿ, ಮದುವೆಯಾಗಲು ನಿರಾಕರಣೆ ಮಾಡಿದ್ದಾನೆ. ಇದರ ಬೆನ್ನಲ್ಲೇ ಸಂತ್ರಸ್ತೆಯ ಮೇಲೆ ಗ್ರಾಮದ ದುರುಳರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಬಿಹಾರದ ಪಶ್ಚಿಮ ಚಂಪಾರಣ್ದಲ್ಲಿ ಈ ಘಟನೆ ನಡೆದಿದೆ. ಹುಡುಗನ ಪ್ರೀತಿಯ ಬಲೆಗೆ ಬಿದ್ದ ಯುವತಿ ಆತನೊಂದಿಗೆ ದೈಹಿಕ ಸಂಪರ್ಕ ನಡೆಸಲು ಒಪ್ಪಿಕೊಂಡಿದ್ದಾಳೆ. ಪರಿಣಾಮ ಗರ್ಭಿಣಿಯಾಗಿದ್ದಾಳೆ. ಇದರ ಬಗ್ಗೆ ಪ್ರಿಯಕರನಿಗೆ ತಿಳಿಸಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾಳೆ. ಇದಕ್ಕೆ ನಿರಾಕರಿಸಿರುವ ಆತ, ಗರ್ಭಪಾತ ಮಾಡಿಸಿದ್ದಾನೆ. ಇದರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಕೆಯನ್ನ ಮನೆಯಿಂದ ಹೊರಹಾಕಿದ್ದಾರೆ. ಈ ವೇಳೆ ಯುವತಿ ಗ್ರಾಮದ ಶಾಲೆಯಲ್ಲಿ ವಾಸ ಮಾಡಲು ಶುರು ಮಾಡಿದ್ದಾಳೆ.
ಇದನ್ನೂ ಓದಿ:ಬೀದಿ ವ್ಯಾಪಾರಿಗಳ ಮೇಲೆ ಹರಿದ ಶಾಸಕರ ಸ್ಟಿಕರ್ ಇದ್ದ ವಾಹನ: ಶಿಶು ಸಾವು, ನಾಲ್ವರಿಗೆ ಗಾಯ
ಶಾಲೆಯಲ್ಲಿ ವಾಸವಾಗಿದ್ದ ಬಾಲಕಿ ಮೇಲೆ ಮಾರ್ಚ್ 5ರಂದು ಗ್ರಾಮದ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಘಟನೆ ಬಗ್ಗೆ ಯಾರಿಗಾದ್ರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ 11ರಂದು ಗ್ರಾಮದ ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಿದ್ದಾನೆ.
ಮಾರ್ಚ್ 11ರಂದು ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ್ದು, ದೂರು ದಾಖಲು ಮಾಡಿದ್ದಾಳೆ. ಇದರ ಬೆನ್ನಲ್ಲೇ ಯುವತಿಯ ಪ್ರಿಯಕರನ ಬಂಧನ ಮಾಡಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಗೊಂಡಿದೆ. ದುಷ್ಕೃತ್ಯವೆಸಗಿರುವ ಓರ್ವ ಆರೋಪಿಯ ಬಂಧನ ಮಾಡಲಾಗಿದ್ದು, ಉಳಿದವರಿಗೋಸ್ಕರ ಶೋಧಕಾರ್ಯ ಮುಂದುವರೆಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಉಮಾಶಂಕರ್ ತಿಳಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಉಳಿದ ಕೆಲ ಆರೋಪಿಗಳು ಮನೆ ಬಿಟ್ಟು ಪರಾರಿಯಾಗಿದ್ದಾರೆ.