ಗ್ವಾಲಿಯರ್ (ಮಧ್ಯಪ್ರದೇಶ): ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವಿವೇಕದಿಂದ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್) ನೀಡುವ ಮೂಲಕ ಬದುಕಿಸಿದ ಘಟನೆ ಗ್ವಾಲಿಯರ್ ನಗರದಲ್ಲಿ ನಡೆಯಿತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇದನ್ನು ತಕ್ಷಣ ಗಮನಿಸಿದ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೋನಂ ಪರಾಶರ್ ಎಂಬವರು ಆಂಬ್ಯುಲೆನ್ಸ್ ಬರುವವರೆಗೂ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ಆಂಬ್ಯುಲೆನ್ಸ್ ಬಂದ ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
ಅಧಿಕಾರಿಯ ಮಾನವೀಯ ಗುಣಕ್ಕೆ ಪ್ರಶಂಸೆ:ಸಬ್ ಇನ್ಸ್ಪೆಕ್ಟರ್ ಸೋನಂ ಅವರ ಮಾನವೀಯ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ಜನರು ಭೇಷ್ ಎನ್ನುತ್ತಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವರು ವಿಡಿಯೋ ಕರೆ ಮಾಡಿ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಶ್ಲಾಘನೀಯ ಕಾರ್ಯಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.