ಹತ್ರಾಸ್(ಉತ್ತರಪ್ರದೇಶ): ಜಿಲ್ಲೆಯ ಲಕ್ಷ್ಮೀ ಟಾಕೀಸ್ ಬಳಿ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕನ ಸಹಚರರು ಹತ್ರಾಸ್ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ.
ಮಹಿಳೆ ತನ್ನ ಅತ್ತೆ ಮನೆಯವರ ಸೂಚನೆ ಮೇರೆಗೆ ಯುವಕನಿಗೆ ಥಳಿಸಿದ್ದಾಳೆ ಎಂಬುದು ಸ್ಥಳದಲ್ಲಿದ್ದವರ ಮಾತಾಗಿದೆ. ಮಾರುಕಟ್ಟೆಯ ಮಧ್ಯದಲ್ಲಿ ಗಲಾಟೆಯಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಹೆಸರು ಕೇಳುತ್ತಿದ್ದಂತೆ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
ಫಿರೋಜಾಬಾದ್‌ನ ಗ್ರಾಮದ ನಿವಾಸಿಯಾಗಿರುವ ಯುವಕ, ಬೆಳಗ್ಗೆ ಪಾಳಿಯಲ್ಲಿ ಪಿಇಟಿ ಪರೀಕ್ಷೆ ಬರೆಯಲು ನಗರದ ಬಾಗ್ಲಾ ಇಂಟರ್ ಕಾಲೇಜಿಗೆ ಬಂದಿದ್ದ. ಪರೀಕ್ಷೆ ಮುಗಿಸಿ ಮಧ್ಯಾಹ್ನದ ವೇಳೆ ಸ್ನೇಹಿತರೊಂದಿಗೆ ಬೇರೆ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಸಂತ್ರಸ್ತ ಯುವಕ ಮತ್ತೊಬ್ಬ ಯುವಕನನ್ನು ಭೇಟಿ ಮಾಡಿದ್ದಾನೆ. ಆ ಯುವಕ ಮೂರ್ನಾಲ್ಕು ಜನರನ್ನು ಕರೆದು ಸಂತ್ರಸ್ತನ ಮೇಲೆ ದಾಳಿ ಮಾಡಿದ್ದಾನೆ. ಅಷ್ಟೇ ಅಲ್ಲ, ಸುತ್ತುವರೆದು ಹೊಡೆಯಲು ಪ್ರಾರಂಭಿಸಿದ್ದಾರೆ. ಇದೇ ವೇಳೆ ಮಹಿಳೆ ಮಾರುಕಟ್ಟೆ ಮಧ್ಯದಲ್ಲೇ ಸಂತ್ರಸ್ತ ಯುವಕನಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ.