ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಲೋಕಸಭೆಯಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ನಿಯಂತ್ರಣ) ಮಸೂದೆ -2020 ಮಂಡಿಸಲಿದ್ದಾರೆ.
ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಮಸೂದೆ ಮೂಲಕ ಸಂತಾನೋತ್ಪತ್ತಿಗೆ ಚಿಕಿತ್ಸೆ ನೀಡುವ ಚಿಕಿತ್ಸಾಲಯಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ. ಚಿಕಿತ್ಸಾಲಯಗಳ ದುರುಪಯೋಗ ತಡೆಗಟ್ಟುವುದು, ಚಿಕಿತ್ಸಾಲಯಗಳಲ್ಲಿ ಸೇವೆಗಳ ಸುರಕ್ಷಿತ ಮತ್ತು ನೈತಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ರೂಪಿಸಲಾಗುತ್ತದೆ.
ಈ ಮಸೂದೆ ಮಾತ್ರವಲ್ಲದೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ- 2021 ಅನ್ನು ಮಂಡಿಸಲು ನಿರ್ಧಾರ ಮಾಡಿದ್ದಾರೆ.