ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಮಧ್ಯೆ ವೈದ್ಯರು ಸೇರಿದಂತೆ ದೇಶದ ಆರೋಗ್ಯ ಕಾರ್ಯಕರ್ತರಲ್ಲಿ ಕೇವಲ ಶೇ. 66 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಲಭ್ಯವಿರುವ ಡೇಟಾದಿಂದ ತಿಳಿದು ಬಂದಿದೆ.
ಲಸಿಕೆ ಕುರಿತ ಅಪನಂಬಿಕೆ ಹಾಗೂ ಹಿಂಜರಿಕೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ವೈದ್ಯರು, ದಾದಿಯರು, ಇಂಟರ್ನಿಗಳು, ತರಬೇತಿ ಪಡೆದ ವೈದ್ಯರು, ಲ್ಯಾಬ್ ತಂತ್ರಜ್ಞರು, ಆಯುಷ್ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಆರೋಗ್ಯ ಕಾರ್ಯಕರ್ತರಾಗಿ ಸರ್ಕಾರ ಗುರುತಿಸಿದೆ. ಇವರೆಲ್ಲ ಸದ್ಯ ಕೋವಿಡ್ ರೋಗಿಗಳ ಜೊತೆಗೆ ಕಾರ್ಯನಿರ್ವಹಿಸುವುದರಿಂದ ಸರ್ಕಾರ ವ್ಯಾಕ್ಸಿನ್ ನೀಡುವಾಗ ಇವರಿಗೆ ಮೊದಲ ಪ್ರಾಶಸ್ತ್ಯ ನೀಡಿತ್ತು.
ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಈವರೆಗೆ ಕೇವಲ 1.64 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗಿದೆ, ಮೊದಲ ಡೋಸ್ ಪಡೆದ ಒಟ್ಟು 0.97 ಕೋಟಿ ಆರೋಗ್ಯ ಕಾರ್ಯಕರ್ತರ ಪೈಕಿ ಕೇವಲ 0.67 ಕೋಟಿ ಜನ ಮಾತ್ರ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಈವರೆಗೆ 2.29 ಕೋಟಿ ಮುಂಚೂಣಿ ಕಾರ್ಮಿಕರು ಲಸಿಕೆ ಪಡೆದಿದ್ದು, ಅದರಲ್ಲಿ 0.83 ಕೋಟಿ ಜನರು ಎರಡನೇ ಡೋಸ್ ಸಹ ಪಡೆದಿದ್ದಾರೆ ಮತ್ತು 1.46 ಕೋಟಿ ಜನರು ಮೊದಲ ಡೋಸ್ ಪಡೆದಿದ್ದಾರೆ.
ಲಸಿಕೆ ಪಡೆಯಲು ಹಿಂಜರಿಕೆ ಮತ್ತು ಲಸಿಕೆಯ ಮೇಲಿನ ನಂಬಿಕೆಯ ಕೊರತೆ ಆರೋಗ್ಯ ಕಾರ್ಯಕರ್ತರ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುವ ಎರಡು ಪ್ರಮುಖ ಕಾರಣಗಳಾಗಿವೆ ಎಂದು ಡಾ.ಅಶೋಕನ್ ಹೇಳಿದರು. ಆರೋಗ್ಯ ಕಾರ್ಯಕರ್ತರು ವಿಶೇಷವಾಗಿ ವೈದ್ಯರು ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಹಿಂಜರಿಯುತ್ತಾರೆ ಎಂದು ಮತ್ತೊಬ್ಬ ಹಿರಿಯ ಆರೋಗ್ಯ ತಜ್ಞ ಡಾ.ಸುನೀಲ್ ಗಾರ್ಗ್ ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ, ಲಸಿಕೆಗಳ ಕೊರತೆಯು ಸಮಸ್ಯೆಯಲ್ಲ ಏಕೆಂದರೆ ಅವರು ಆದ್ಯತೆಯ ಪಟ್ಟಿಯಲ್ಲಿರುತ್ತಾರೆ. ಆದರೆ, ಹಿಂಜರಿಕೆಯ ಕಾರಣಕ್ಕೆ ಅವರು ಲಸಿಕೆ ಪಡೆಯುವ ಪ್ರಮಾಣ ಕಡಿಮೆ ಇದೆ ಎಂದು ಗಾರ್ಗ್ ಹೇಳಿದ್ರು.