ಹೈದರಾಬಾದ್:ಬಾಲ್ಯ ವಿವಾಹಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡ ನಂತರ ನಲುಗಿ ಹೋಗಿರುವ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಅಸ್ಸಾಂ ಸರ್ಕಾರದ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಆರು ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಆಗಿನಿಂದ ನೀವು ಏನು ಮಾಡುತ್ತಿದ್ದೀರಿ?. ಇದು ನಿಮ್ಮ ವೈಫಲ್ಯ. ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳು ಕೋಮುಪ್ರೇರಿತ" ಎಂದು ಟೀಕಿಸಿದ್ದಾರೆ.
ಎಷ್ಟು ಶಾಲೆಗಳನ್ನು ತೆರೆದಿದ್ದೀರಿ?: "ಅಸ್ಸಾಂ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತಿ ಧೋರಣೆ ಹೊಂದಿದೆ. ಹಿಮಂತ ಬಿಸ್ವಾ ಶರ್ಮಾ ಅವರೇ, ಮದರಸಾಗಳನ್ನು ಮುಚ್ಚಿ ಎಷ್ಟು ಶಾಲೆಗಳನ್ನು ತೆರೆದಿದ್ದೀರಿ?, ಏಕೆ ಹೊಸ ಶಾಲೆಗಳನ್ನು ತೆರೆಯುತ್ತಿಲ್ಲ. ಭೂರಹಿತರಿಗೆ ಭೂಮಿ ನೀಡಲು ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಶಿಸ್ತು ಕ್ರಮ: ಮೌಲಾನಾ, ಪೂಜಾರಿಗಳು ಸೇರಿ 2044 ಜನರ ಬಂಧನ
4 ಸಾವಿರಕ್ಕೂ ಹೆಚ್ಚು ಪ್ರಕರಣ: ಅಸ್ಸಾಂನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 2000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಬಂಧನ ಕಾರ್ಯಾಚರಣೆಯು ಶುಕ್ರವಾರ ಬೆಳಿಗ್ಗೆ ಆರಂಭವಾಗಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ ಎಂದು ಸಿಎಂ ತಿಳಿಸಿದ್ದರು. ರಾಜ್ಯ ಸಚಿವ ಸಂಪುಟವು ಜನವರಿ 23ರಂದು ಬಾಲ್ಯವಿವಾಹ ಪ್ರಕರಣಗಳ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 4,004 ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿದ್ದಾರೆ.