ಕರ್ನಾಟಕ

karnataka

ETV Bharat / bharat

ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ಸೇರಿ ಗಣ್ಯರ ಸಂತಾಪ: ಖ್ಯಾತ ಉದ್ಯಮಿ ಬಗ್ಗೆ ತಿಳಿಯಬೇಕಾದ ಐದು ಸಂಗತಿಗಳಿವು - ಪ್ರಧಾನಿ ಮೋದಿ

ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ನಿಧನರಾಗಿದ್ದು, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಿಸ್ತ್ರಿ ಅವರ ಕುರಿತ ಮಾಹಿತಿ ಕೂಡ ನೀಡಲಾಗಿದೆ.

who-was-cyrus-mistry-former-tata-sons-chairman-killed-in-car-crash
ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ಸೇರಿ ಗಣ್ಯರ ಸಂತಾಪ: ಹೆಸರಾಂತ ಉದ್ಯಮಿ ಬಗ್ಗೆ ತಿಳಿಯಬೇಕಾದ ಐದು ಸಂಗತಿಗಳಿವು

By

Published : Sep 4, 2022, 8:53 PM IST

Updated : Sep 4, 2022, 9:11 PM IST

ಮುಂಬೈ (ಮಹಾರಾಷ್ಟ್ರ): ಟಾಟಾ ಸಮೂಹದ ಮಾಜಿ ಅಧ್ಯಕ್ಷ ಮತ್ತು ಭಾರತೀಯ ಮೂಲದ ಐರಿಶ್ ಉದ್ಯಮಿ ಸೈರಸ್ ಮಿಸ್ತ್ರಿ ಭಾನುವಾರ ರಸ್ತೆ ಅಪಘಾತದಲ್ಲಿ ಅಕಾಲಿಕ ಸಾವಿಗೀಡಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರ ಬಗ್ಗೆ ತಿಳಿಯಬೇಕಾದ ಐದು ಸಂಗತಿಗಳು ಇಲ್ಲಿವೆ.

ಪ್ರಮುಖ ಐದು ಸಂಗತಿಗಳು

  • 1. ಸೈರಸ್ ಮಿಸ್ತ್ರಿ ಅವರು 1968ರಲ್ಲಿ ಮುಂಬೈನ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ನಿರ್ಮಾಣ ಉದ್ಯಮಿ ಪಲ್ಲೊಂಜಿ ಮಿಸ್ತ್ರಿ ಅವರ ಕಿರಿಯ ಮಗ ಮತ್ತು ಕೈಗಾರಿಕೋದ್ಯಮಿ ಶಾಪೂರ್ಜಿ ಮಿಸ್ತ್ರಿ ಅವರ ಮೊಮ್ಮಗ. ಇವರ ಕುಟುಂಬವು ಟಾಟಾ ಸನ್ಸ್‌ನಲ್ಲಿ 18.5 ಪ್ರತಿಶತ ಪಾಲನ್ನು ಹೊಂದಿದ್ದು, ಇದೇ ಅತಿದೊಡ್ಡ ಪಾಲಾಗಿದೆ.
  • 2. ಮುಂಬೈನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಮಿಸ್ತ್ರಿ ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದರು. ತರುವಾಯ ಲಂಡನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. 1966 ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಇಂಟರ್​​ ನ್ಯಾಷನಲ್ ಎಕ್ಸಿಕ್ಯೂಟಿವ್ ಮಾಸ್ಟರ್ಸ್ ಪದವಿಯನ್ನು ಸಹ ಪಡೆದರು.
  • 3. 2006ರ ಸೆಪ್ಟೆಂಬರ್ 1ರಂದು ಟಾಟಾ ಸನ್ಸ್‌ಗೆ ಸೈರಸ್ ಮಿಸ್ತ್ರಿ ಸೇರಿದರು. ಸಂಸ್ಥೆಯಿಂದ ತಮ್ಮ ತಂದೆ ನಿವೃತ್ತರಾದ ಒಂದು ವರ್ಷದಲ್ಲಿ ಟಾಟಾ ಸಮೂಹಕ್ಕೆ ಸೇರಿದ ಮಿಸ್ತ್ರಿ ಹಲವಾರು ಕಾರ್ಯನಿರ್ವಾಹಕೇತರ ಹುದ್ದೆಗಳನ್ನು ನಿರ್ವಹಿಸಿದರು. ಅಲ್ಲದೇ, 2012ರಲ್ಲಿ ರತನ್ ಟಾಟಾ ಅವರು ಸ್ಥಾನದಿಂದ ಕೆಳಗಿಳಿದ ನಂತರ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡರು.
  • 4. ಆದಾಗ್ಯೂ, 2016ರಲ್ಲಿ ಟಾಟಾ ಮಂಡಳಿಯು ಅವಿಶ್ವಾಸ ಮತದ ಮೂಲಕ ಅಧ್ಯಕ್ಷ ಸ್ಥಾನದಿಂದ ಮಿಸ್ತ್ರಿ ಅವರನ್ನು ಪದಚ್ಯುತಗೊಳಿಸಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಮಿಸ್ತ್ರಿ ಕುಟುಂಬಕ್ಕೆ ಸೇರಿದ ಎರಡು ಸಂಸ್ಥೆಗಳಾದ ಸೈರಸ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಟಾಟಾ ಸನ್ಸ್‌ ವಿರುದ್ಧ ದುರುಪಯೋಗ ಆಪಾದನೆ ಮೇಲೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಮೊರೆ ಹೋದವು.
  • 5. ಕೈಗಾರಿಕೋದ್ಯಮಿ ರೋಹಿಕಾ ಚಾಗ್ಲಾ ಅವರನ್ನು ಸೈರಸ್​ ವಿವಾಹವಾಗಿದ್ದರು. ಇಬ್ಬರು ಪುತ್ರರಾದ ಫಿರೋಜ್ ಮಿಸ್ತ್ರಿ ಮತ್ತು ಜಹಾನ್ ಮಿಸ್ತ್ರಿ ಅವರನ್ನು ಹೊಂದಿದ್ದಾರೆ. ಭಾರತದಲ್ಲಿ ಮಿಸ್ತ್ರಿ ಅವರ ಕಾನೂನು ಸ್ಥಾನಮಾನವು ಭಾರತದ ಸಾಗರೋತ್ತರ ನಾಗರಿಕ (ಓಸಿಐ) ಎಂದೇ ಆಗಿತ್ತು.

ಗಣ್ಯರ ಸಂತಾಪ

ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್​,​ ಎನ್​ಸಿಪಿ ವರಿಷ್ಠ ಶರದ್​ ಪವಾರ್​, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉದ್ಯಮಿ ಗೌತಮ್​ ಅದಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ಧಾರೆ.

  • ಸೈರಸ್ ಮಿಸ್ತ್ರಿಯವರ ಅಕಾಲಿಕ ನಿಧನ ಆಘಾತಕಾರಿಯಾಗಿದೆ. ಅವರು ಭಾರತದ ಆರ್ಥಿಕ ಪರಾಕ್ರಮದಲ್ಲಿ ನಂಬಿಕೆಯಿಡುವ ಭರವಸೆಯ ವ್ಯಾಪಾರ ನಾಯಕರಾಗಿದ್ದರು. ಅವರ ನಿಧನದಿಂದ ವಾಣಿಜ್ಯ ಮತ್ತು ಉದ್ಯಮ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.
  • ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಕಾಲಿಕ ನಿಧನದ ಆಘಾತಕಾರಿ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ಕ್ರಿಯಾತ್ಮಕ ಮತ್ತು ಅದ್ಭುತ ಉದ್ಯಮಿಯಾಗಿದ್ದರು. ನಾವು ಕಾರ್ಪೊರೇಟ್ ಪ್ರಪಂಚದ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದನ್ನು ಕಳೆದುಕೊಂಡಿದ್ದೇವೆ ಎಂದು ಶರದ್​ ಪವಾರ್ ಟ್ವೀಟ್​ ಮಾಡಿ ತಿಳಿಸಿದ್ದಾರೆ.
  • ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ನಿಧನದ ದುರಂತ ಸುದ್ದಿಯಿಂದ ದುಃಖವಾಗಿದೆ. ಅವರು ಭಾರತದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ದೇಶದ ಉದ್ಯಮಿಗಳಲ್ಲಿ ಒಬ್ಬರು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.
  • ಆಕಸ್ಮಿಕ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿಯವರ ಅಕಾಲಿಕ ನಿಧನ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಆರ್ಥಿಕತೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ದೊಡ್ಡ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅಗಲಿದ ಮಿಸ್ತ್ರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಹ ಟ್ವೀಟ್ ಮಾಡಿದ್ದಾರೆ‌.
  • ಸೈರಸ್ ಮಿಸ್ತ್ರಿ ಅವರ ನಿಧನದ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ನಾನು ತಿಳಿದಿರುವ ಅತ್ಯುತ್ತಮ ಮಹನೀಯರಲ್ಲಿ ಒಬ್ಬರು. ಅವರು ನಮ್ಮ ಪೀಳಿಗೆಯ ಅತ್ಯುತ್ತಮ ವ್ಯಾಪಾರ ಮನಸ್ಸಿನವರಾಗಿದ್ದರು. ಅವರನ್ನು ತುಂಬಾ ಬೇಗ ವಿಧಿ ಕರೆಸಿಕೊಂಡಿದೆ. ಓಂ ಶಾಂತಿ ಎಂದು ಉದ್ಯಮಿ ಗೌತಮ್​ ಅದಾನಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವು: ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ವಿಡಿಯೋ

Last Updated : Sep 4, 2022, 9:11 PM IST

ABOUT THE AUTHOR

...view details