ಕರ್ನಾಟಕ

karnataka

ETV Bharat / bharat

ಇಂಧನ ಬೆಲೆಗಳ ಏರಿಕೆ.. ಕೇಂದ್ರ ಸರ್ಕಾರಕ್ಕೆ 7 ವರ್ಷದಲ್ಲಿ ಶೇ.556ರಷ್ಟು ಆದಾಯ ಹೆಚ್ಚಳ.. - ಡೀಸೆಲ್ ಬೆಲೆ

2008ರಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರೆಲ್‌ಗೆ 150 ಡಾಲರ್ ಇದ್ದಾಗ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 50 ರೂ. ಇತ್ತು. ಮತ್ತು ಪ್ರತಿ ಲೀಟರ್‌ ಡೀಸೆಲ್‌ ರೂ.35ಕ್ಕೆ ದೊರೆಯುತ್ತಿತ್ತು. ಈಗ ಕಚ್ಛಾ ತೈಲದ ಬೆಲೆ ಡಾಲರ್‌ 60ರಷ್ಟು ಇಳಿಕೆಯಾಗಿದ್ದರೂ ತೈಲ ಬೆಲೆಗಳು ಏಕೆ ಗಗನಮುಖಿಯಾಗಿ ಸಾಗುತ್ತಿವೆ?..

Who is responsible for the rise of fuel prices?
ಇಂಧನ ಬೆಲೆಗ ಏರಿಕೆ ಆಗುತ್ತಿರುವುದಕ್ಕೆ ಯಾರು ಕಾರಣ ?

By

Published : Mar 27, 2021, 8:10 PM IST

ಕೋವಿಡ್‌ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಗಾಯಕ್ಕೆ ಉಪ್ಪು ಸವರಿದಂತೆ ತೈಲ ಉತ್ಪನ್ನಗಳ ಸುಂಕ ಹೇರಿಕೆ ಜನರನ್ನು ತೊಂದರೆಗಳ ಸುಳಿಗೆ ಸಿಲುಕುವಂತೆ ಮಾಡಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳು ದೇಶದ ಎಲ್ಲೆಡೆ ಕೋಲಾಹಲಕ್ಕೆ ಕಾರಣವಾಗಿವೆ. ಕೆಲ ಸ್ಥಳಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹100ರ ಗಡಿ ದಾಟಿದೆ.

ಬೆಲೆಗಳಲ್ಲಿ ನೆಪ ಮಾತ್ರದ ಕಡಿತ ಆಗಿದ್ದರೂ ಸಾಮಾನ್ಯ ಜನರ ಬಜೆಟ್‌ನ ಒಟ್ಟಾರೆ ಬೆಲೆ ಏರಿಕೆಗೆ ಹೋಲಿಸಿದರೆ ಈಗ ಬಿದ್ದಿರುವ ಹೊರೆ ಎದುರು ಇದು ಏನೇನೂ ಅಲ್ಲ. ಎಲ್‌ಪಿಜಿಯನ್ನು ಜಿಎಸ್‌ಟಿ ಅಡಿ ತರಲು ತಮ್ಮ ಸರ್ಕಾರ ಬದ್ ಎಂದು ಮೋದಿ ಹೇಳಿಕೆ ನೀಡಿದ್ದರು. ಪೆಟ್ರೋಲ್ ಮತ್ತು ಡೀಸೆಲ್‌ನ ಜಿಎಸ್‌ಟಿ ಅಡಿ ತರುವ ಬೇಡಿಕೆ ಸಂಸತ್ತಿನಲ್ಲಿ ಪ್ರತಿಧ್ವನಿಸಿತು.

ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಒಂದು ವಾರದ ಅವಧಿಯಲ್ಲಿಯೇ ತಮ್ಮ ನಿಲುವು ಬದಲಿಸಿದರು. ಈಗ ಅವರು ಹೇಳುತ್ತಿರುವ ಪ್ರಕಾರ ಕೇಂದ್ರ ತೆರಿಗೆ, ಹೆಚ್ಚುವರಿ ಶುಲ್ಕಗಳು, ರಾಜ್ಯ ಸರ್ಕಾರದ ವ್ಯಾಟ್‌ ಬದಲಿಗೆ ತೈಲ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಅಧಿಕಾರ ಜಿಎಸ್‌ಟಿ ಮಂಡಳಿಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳಿಂದ ವಾರ್ಷಿಕ 5 ಲಕ್ಷ ಕೋಟಿ ರೂ. ತೆರಿಗೆ ಗಳಿಸುತ್ತಿವೆ ಎಂದು ಕೂಡ ಅವರು ತಿಳಿಸಿದ್ದಾರೆ.

ಹಣಕಾಸು ಸಚಿವರು ಈ ಘೋಷಣೆ ಮಾಡಿದ ಕೂಡಲೇ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ, ಭಿನ್ನಾಭಿಪ್ರಾಯದ ಧ್ವನಿ ಎತ್ತಿದರು. ಮುಂದಿನ 8 ರಿಂದ 10 ವರ್ಷಗಳವರೆಗೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ತರಲು ಸಾಧ್ಯವಿಲ್ಲ. ಯಾಕೆಂದರೆ, ಇದರಿಂದ ರಾಜ್ಯಗಳಿಗೆ ವಾರ್ಷಿಕ ರೂ. 2 ಲಕ್ಷ ಕೋಟಿ ನಷ್ಟ ಉಂಟಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲಿಯಂ ಮೇಲೆ ಹೇರಿದ ಹೊರೆಯ ಅಗಾಧತೆಯನ್ನು ಇದು ಸಾರಿ ಹೇಳುತ್ತಿದೆ. ಜನರ ಜೇಬಿಗೆ ಕತ್ತರಿ ಬೀಳುತ್ತಿದ್ದರೂ ಇಂಧನಗಳ ಮೇಲೆ ತೆರಿಗೆ ವಿಧಿಸುವಲ್ಲಿ ಸರ್ಕಾರಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ.

ಅಂತಾರಾಷ್ಟ್ರೀಯ ತೈಲ ಬೆಲೆ ಏರಿಳಿತವನ್ನು ದೂಷಿಸುವುದು ನಮ್ಮ ನಾಯಕರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಶೇ.89ರಷ್ಟು ತೈಲ ಮತ್ತು ಶೇ.53ರಷ್ಟು ಅನಿಲದ ಮೇಲೆ ಭಾರತ ಆಮದನ್ನೇ ಅವಲಂಬಿಸಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಅವರು ಹೇಳುತ್ತಾರೆ.

2008ರಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರೆಲ್‌ಗೆ 150 ಡಾಲರ್ ಇದ್ದಾಗ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 50 ರೂ. ಇತ್ತು. ಮತ್ತು ಪ್ರತಿ ಲೀಟರ್‌ ಡೀಸೆಲ್‌ ರೂ.35ಕ್ಕೆ ದೊರೆಯುತ್ತಿತ್ತು. ಈಗ ಕಚ್ಛಾ ತೈಲದ ಬೆಲೆ ಡಾಲರ್‌ 60ರಷ್ಟು ಇಳಿಕೆಯಾಗಿದ್ದರೂ ತೈಲ ಬೆಲೆಗಳು ಏಕೆ ಗಗನಮುಖಿಯಾಗಿ ಸಾಗುತ್ತಿವೆ ?

ಕಹಿ ವಿಚಾರ ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಕಡಿಮೆ ಆಗುವುದನ್ನು ತಡೆಯುತ್ತಿದ್ದು, ವಿವಿಧ ಅಬಕಾರಿ ಸುಂಕಗಳನ್ನು ವಿಧಿಸುವ ಮೂಲಕ ಲಾಭ ಮಾಡಿಕೊಳ್ಳುತ್ತಿವೆ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲಿಯಂ ಮೇಲಿನ ಕರ್ತವ್ಯದಿಂದ ಸರ್ಕಾರದ ಆದಾಯ ಶೇ.556ರಷ್ಟು ಹೆಚ್ಚಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಸ್ವತಃ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಪೆಟ್ರೋಲ್‌ ಬೆಲೆಯ ಶೇ.56ರಷ್ಟು ಮತ್ತು ಡೀಸೆಲ್ ಬೆಲೆಯ ಶೇ.36ರಷ್ಟು ವಿವಿಧ ಸುಂಕಗಳನ್ನು ಒಳಗೊಂಡಿರುತ್ತದೆ ಎಂದು ಈ ಹಿಂದೆ ರಂಗರಾಜನ್ ಸಮಿತಿ ಬಹಿರಂಗಪಡಿಸಿತ್ತು. ಈಗ ಇಂಧನ ಬೆಲೆ ಮೇಲೆ ಅಬಕಾರಿ ಸುಂಕ ಶೇ. 70ರಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.

ಅಂತಾರಾಷ್ಟ್ರೀಯ ದರ ಲೆಕ್ಕಿಸದೆ ಸರ್ಕಾರಗಳು ಇಂಧನ ಬೆಲೆ ಹೆಚ್ಚಿಸುತ್ತಿವೆ. ವಿವಿಧ ಸುಂಕಗಳ ರೂಪದಲ್ಲಿ ತಮ್ಮ ಪಾಲನ್ನು ಬಾಚಿಕೊಳ್ಳುತ್ತಿವೆ. ಇದು ಸಾರ್ವಜನಿಕರ ಲೂಟಿ ಅಲ್ಲದೆ ಮತ್ತಿನ್ನೇನು? ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವಿಕೆಯನ್ನು ತರ್ಕಬದ್ಧಗೊಳಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಸ್ವಾಗತಾರ್ಹ ಸಲಹೆ ನೀಡಿದೆ. ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕರಿಸುವ ಅಗತ್ಯ ಇದೆ ಎಂದು ಆರ್‌ಬಿಐ ಗವರ್ನರ್‌ ಶ್ರೀ ಶಕ್ತಿಕಾಂತ ದಾಸ್ ಸಲಹೆ ನೀಡಿದ್ದಾರೆ.

ಲೆಕ್ಕಾಚಾರಗಳ ಪ್ರಕಾರ ಇಂಧನ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಜನರ ಪಾಲಿಗೆ ದೊಡ್ಡ ವರದಾನ ಆಗಲಿದೆ. ಜನರ ಕಲ್ಯಾಣವನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವ ಮೂಲಕ ಕೇಂದ್ರ ಸರ್ಕಾರ ಇಂಧನ ಬೆಲೆಗಳ ಹತೋಟಿಗೆ ತಕ್ಷಣ ಕ್ರಮಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಹೆಜ್ಜೆ ಇಡುವಂತೆ ಅದು ರಾಜ್ಯ ಸರ್ಕಾರಗಳಿಗೆ ಕೂಡ ನಿರ್ದೇಶನ ನೀಡಬೇಕಿದ್ದು, ಇದರಿಂದಾಗಿ ದೇಶದ ಹತಾಶ ಜನ ಸಮುದಾಯಕ್ಕೆ ಸ್ವಲ್ಪವಾದರೂ ಪರಿಹಾರ ದೊರೆಯಬಹುದು.

ABOUT THE AUTHOR

...view details