ಚಂಡೀಗಢ:ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆ ಖಲಿಸ್ತಾನಿ ಬೆಂಬಲಿಗ ಹಾಗೂ "ವಾರಿಸ್ ಪಂಜಾಬ್ ದೇ" ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ನನ್ನು ಪಂಜಾಬ್ ಪೊಲೀಸರು ಮೊಗಾದಲ್ಲಿ ಬಂಧಿಸಿದ್ದಾರೆ. ಸದ್ಯ ಆತನನ್ನು ಅಸ್ಸೋಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಸ್ವಘೋಷಿತ ಮೂಲಭೂತವಾದಿ ಹಾಗೂ ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಸಮಾಜದಲ್ಲಿ ಅಶಾಂತಿ ಎಬ್ಬಿಸಲು ಪ್ರಯತ್ನಿಸಿದ್ದ ಆತನ ಸಹಚರರನ್ನು ಬಂಧಿಸಿ ಅಪಾರ ಪ್ರಮಾಣದಲ್ಲಿ ಶಸ್ತಾಸ್ತ್ರಗಳನ್ನು ವಶಪಡಿಕೊಳ್ಳಲಾಗಿತ್ತು.
ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಖಲಿಸ್ತಾನಿ ಬೆಂಬಲಿಗ ಯೂಟ್ಯೂಬ್ ಲೈವ್ ಬಂದು ತಾನು ಪೊಲೀಸರಿಗೆ ಶರಣಾಗಲ್ಲ ಎಂದು ಹೇಳಿಕೊಂಡಿದ್ದ. ಕಳೆದ ಕೆಲವು ದಿನಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಆತ 2 ಬಾರಿ ಯೂಟ್ಯೂಬ್ ವಿಡಿಯೋ ಬಿಡುಗಡೆ ಮಾಡಿದ್ದ. ವೇಷ ಮರೆಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆದಾಡುತ್ತಿದ್ದ ಅಮೃತ್‌ಪಾಲ್ ಸಿಂಗ್, ಪಂಜಾಬ್‌ನ ಗೋಪ್ಯ ಸ್ಥಳದಲ್ಲಿ ಅಡಗಿರುವುದು ಗೊತ್ತಾಗಿತ್ತು. ಮೊದಲ ವಿಡಿಯೋದಲ್ಲಿ ಪಂಜಾಬ್‌ಗೆ ಮರಳಿರುವುದರ ಬಗ್ಗೆ ಆತ ಮಾಹಿತಿ ನೀಡಿದ್ದ.
ಯಾರು ಈ ಅಮೃತಪಾಲ್ ಸಿಂಗ್?: ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಅಮೃತ್‌ಪಾಲ್ ಸಿಂಗ್ ಗುರುತಿಸಿಕೊಂಡಿದ್ದ. ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದನಾದ ಈತ ಸುಮಾರು 10 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ. 2021ರಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ನಿಶಾನ ಸಾಹಿಬ್ ಧ್ವಜ ಹಾರಿಸುವ ಮೂಲಕ ಸುದ್ದಿಯಾಗಿದ್ದ. ಈತ ವಾರಿಸ್ ಪಂಜಾಬ್ ದೇ ಸಂಘಟನೆಯ ದೀಪ್ ಸಿಧುವಿನ ಬೆಂಬಲಿಗನ್ನಾಗಿದ್ದ. ಸಿಧು ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಈತ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ. ಖಲಿಸ್ತಾನಿ ಬೆಂಬಲಿಗನ್ನಾಗಿದ್ದ ಈತ ಅಕ್ರಮಣಕಾರಿ ಭಾಷಣ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆದಿದ್ದ.