ನವದೆಹಲಿ: ಭಾರತದಲ್ಲಿ ಪ್ರಸ್ತುತ ಒಂದು ವರ್ಷದವರೆಗೆ ಅಗತ್ಯವಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಗೋಧಿ ದಾಸ್ತಾನಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದರು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗೋಧಿ ರಫ್ತು ತಡೆಯಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ವರ್ಷದಲ್ಲಿ, ಏಪ್ರಿಲ್ 1, 2023ರಂದು ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ ಭಾರತವು 80 LMT ಗೋಧಿಯ ದಾಸ್ತಾನು ಹೊಂದಿರುತ್ತದೆ, ಇದು ಕನಿಷ್ಟ ಅವಶ್ಯಕತೆಯಾದ 75 LMT ಗಿಂತ ಹೆಚ್ಚಾಗಿರುತ್ತದೆ. ಉತ್ಪಾದನೆಯು 1,050ಕ್ಕೆ ನಿರೀಕ್ಷಿಸಲಾಗಿದ್ದರೂ ಸಹ ಭಾರತವು ಹೆಚ್ಚುವರಿ ಗೋಧಿ ಹೊಂದಿದೆ ಎಂದು ಅವರು ಹೇಳಿದರು.
ಇದುವರೆಗೆ 40 LMT ಗೋಧಿ ರಫ್ತು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಏಪ್ರಿಲ್ 2022 ರಲ್ಲಿ ಸುಮಾರು 11 LMT ರಫ್ತು ಮಾಡಲಾಗಿದೆ. ಈಜಿಪ್ಟ್ ಮತ್ತು ಟರ್ಕಿ ಕೂಡ ಭಾರತೀಯ ಗೋಧಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಜೂನ್‌ನಿಂದ ಅರ್ಜೆಂಟಿನಾ ಮತ್ತು ಆಸ್ಟ್ರೇಲಿಯಾದಿಂದ ಗೋಧಿ ಬರಲು ಶುರುವಾಗುತ್ತದೆ. ಆದ್ದರಿಂದ ರಫ್ತುದಾರರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗೋಧಿ ಮಾರಾಟ ಮಾಡಲು ಇದು ಸಕಾಲ ಎಂದರು.