ಶ್ರೀನಗರ: ಸರ್ಕಾರವು ಕಾಶ್ಮೀರದ ಜನರೊಂದಿಗೆ ಮಾತನಾಡುತ್ತದೆ ಮತ್ತು ಲಡಾಖ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳನ್ನು ದೇಶದ ಸಮೃದ್ಧ ಪ್ರದೇಶಗಳನ್ನಾಗಿ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಕಣಿವೆ ರಾಜ್ಯದ ಹಲವು ನಾಯಕರು ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಪ್ರವಾಸದ ಕುರಿತು ವ್ಯಂಗ್ಯವಾಡಿದ್ದರು. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪಾಕಿಸ್ತಾನ ಜೊತೆ ಮಾತುಕತೆ ನಡೆಸಿ ಎಂದು ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದರು. ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಶ್ರೀನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ನಾನು ಜಮ್ಮು ಕಾಶ್ಮೀರದ ಯುವಕರ ಜೊತೆ ಮಾತನಾಡುತ್ತೇನೆ. ಪಾಕಿಸ್ತಾನದ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿನ ಸಭೆಯೊಂದರಲ್ಲಿ ಮಾತನಾಡಿದ ಅಮಿತ್ ಶಾ, ನಾನು ಜಮ್ಮು ಮತ್ತು ಕಾಶ್ಮೀರದ ಯುವ ಜನಾಂಗದ ಜೊತೆ ಮಾತನಾಡುತ್ತೇನೆ. ಶಾಂತಿ ಸ್ಥಾಪನೆಗೆ ಪಾಕಿಸ್ತಾನದ ಜೊತೆ ಮಾತನಾಡುವ ಅಗತ್ಯ ಭಾರತಕ್ಕಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ನಿಮ್ಮ ಜೊತೆಗೆ ಮುಕ್ತವಾಗಿ ಮಾತನಾಡುತ್ತೇನೆ. ಹೀಗಾಗಿ ಇಲ್ಲಿ ಬುಲೆಟ್‌ಪ್ರೂಫ್ ಸೆಕ್ಯೂರಿಟಿ ಇಲ್ಲ. ಕಾಶ್ಮೀರದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಯುವ ಜನಾಂಗದ ಕೊಡುಗೆ ಮಹತ್ವದ್ದಾಗಿದೆ. ಇಲ್ಲಿನ ಅಭಿವೃದ್ಧಿ ವೇಗ ನೀವು ಗಮನಿಸಿದ್ದೀರಿ. ಹೀಗಾಗಿ ಕೇಂದ್ರ ಸರ್ಕಾರ ಸದಾ ಕಣಿವೆ ರಾಜ್ಯದ ಜೊತೆಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಈ ವೇಳೆ, ಹಲವು ಯೋಜನೆಗಳ ಉದ್ಘಾಟನೆ, ಕಣಿವೆ ರಾಜ್ಯದಲ್ಲಿ ಭದ್ರತಾ ಪರಿಶೀಲನೆ ಸೇರಿದಂತೆ ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.