ರಾಯಪುರ (ಛತ್ತೀಸ್‌ಗಢ): 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂದು ಪಕ್ಷದ ಹಿರಿಯ ನಾಯಕರಾದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಿಳಿಸಿದ್ದಾರೆ. ಅಲ್ಲದೇ, ರಾಹುಲ್ ಅವರ ಉಮೇದುವಾರಿಕೆಯನ್ನು ಇತರ ಪಕ್ಷಗಳು ಕೂಡ ಒಪ್ಪಿಕೊಳ್ಳುವ ಭರವಸೆಯನ್ನು ಪಕ್ಷ ಹೊಂದಿದೆ ಎಂದು ಹೇಳಿದ್ದಾರೆ.
ರಾಯಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಅವರನ್ನು ಇತರ ಪಕ್ಷಗಳು ತಮ್ಮ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಘೇಲ್, ಕಾಲಕ್ಕೆ ತಕ್ಕಂತೆ ಬದಲಾವಣೆ ಬರಲಿದೆ. ಭಾರತ್ ಜೋಡೋ ಯಾತ್ರೆಯ ಮೊದಲು ರಾಹುಲ್ ಗಾಂಧಿಯ ಬಗ್ಗೆ ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಯಾತ್ರೆ ಮುಗಿದ ನಂತರ ಪರಿಸ್ಥಿತಿಯು ಹೇಗೆ ಬದಲಾಗಿದೆ ಎಂಬುದನ್ನು ದೇಶವು ಗಮನಿಸುತ್ತಿದೆ ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಲಿ:ಇದೇ ವೇಳೆ, ಜನರು ಇವಿಎಂ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದ 2024ರ ಲೋಕಸಭೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕೆಂದು ಸಿಎಂ ಬಘೇಲ್ ಆಗ್ರಹಿಸಿದರು. ಜನರು ಮತಪೆಟ್ಟಿಗೆಯಲ್ಲಿ ಏನಿದೆ ಹಾಗೂ ಏನಿಲ್ಲ ಎಂಬುವುದನ್ನು ನೋಡಬಹುದು. ಆದರೆ, ಇವಿಎಂ ವಿಷಯದಲ್ಲಿ ಹಾಗಲ್ಲ. ಹೀಗಾಗಿಯೇ, 2024ರ ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಬೇಕೆಂದು ನಾವು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಮತ್ತೊಂದು ಯಾತ್ರೆಗೆ ಸಿದ್ಧ - ರಾಹುಲ್: ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತ್ ಜೋಡೋ ಯಾತ್ರೆಯಂತಹ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮತ್ತು ಕಾರ್ಯಕರ್ತರು ಈ ತಪಸ್ಸು ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.