ನವದೆಹಲಿ: ಮಿಜೋರಾಂನ ಐದು ವರ್ಷದ ಬಾಲಕಿ ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ್ದ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮಿಜೋರಾಂನ 5 ವರ್ಷ ವಯಸ್ಸಿನ ಎಸ್ತರ್ ಹನ್ಮೇಟ್ ಎಂಬ ಬಾಲಕಿ ಅಸ್ಸೋಂನ ಮೂರು ರೈಫಲ್ಸ್ಗಳೊಂದಿಗೆ ರಾಷ್ಟ್ರಗೀತೆ ಹಾಡಿದ್ದಾಳೆ. ಎಸ್ತರ್, ಸೈನ್ಯದ ಸಮವಸ್ತ್ರವನ್ನು ಧರಿಸಿ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತ ಸೈನಿಕರ ಜೊತೆಯಲ್ಲಿ ರಾಷ್ಟ್ರಗೀತೆ ಹಾಡಿದ್ದಾಳೆ.
ಈ ವಿಡಿಯೋವನ್ನು ಸ್ವತಃ ಮಿಜೋರಾಂನ ಸಿಎಂ ಝೊರಾಮ್ಥಂಗ ಸೇರಿ ಹಲವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಗೂ ಎರಡು ದಿನಗಳ ಮುನ್ನ ಅಂದರೆ ಆಗಸ್ಟ್ 13ರಂದು ಈ ವಿಡಿಯೋವನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಏರ್ ಮಾರ್ಷಲ್ ಅನಿಲ್ ಚೋಪ್ರಾ ಕೂಡ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಈಶಾನ್ಯ ರಾಜ್ಯದ ಹಲವಾರು ಆಕರ್ಷಕ ಚಿತ್ರಗಳು ಮತ್ತು ಸ್ಥಳೀಯ ಸಂಗೀತಗಾರರು ಹಿನ್ನೆಲೆಯಲ್ಲಿ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವುದನ್ನು ಕಾಣಬಹುದು. ಎಸ್ತರ್ ಕಳೆದ ವರ್ಷ 'ವಂದೇ ಮಾತರಂ' ಗೀತೆ ಹಾಡಿದ್ದಳು. ಪ್ರಧಾನಿ ಮೋದಿ ವಿಡಿಯೋ ಶೇರ್ ಮಾಡಿ ಬಾಲಕಿಯ ಗುಣಗಾನ ಮಾಡಿದ್ದರು.
ಎಸ್ತರ್, 5 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದು, ವಿವಿಧ ಹಾಡುಗಳನ್ನು ಅಪ್ಲೋಡ್ ಮಾಡುತ್ತಾರೆ.