ಛತ್ತೀಸ್‌ಗಢ/ಮಿಜೋರಾಂ: ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನದಲ್ಲಿ 20 ಸ್ಥಾನಗಳಿಗೆ ನಡೆದ ಮತದಾನದ ಅಂಕಿಅಂಶಗಳನ್ನು ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. 20 ವಿಧಾನಸಭೆಗಳ ಪೈಕಿ ಭಾನುಪ್ರತಾಪುರದಲ್ಲಿ ಅತಿ ಹೆಚ್ಚು ಶೇ.79 ರಷ್ಟು ಮತದಾನ ದಾಖಲಾಗಿದೆೆ. ಬಿಜಾಪುರದಲ್ಲಿ ಅತಿ ಕಡಿಮೆ ಶೇ.40.98 ರಷ್ಟು ಮತದಾನ ದಾಖಲಾಗಿದೆ. ಒಟ್ಟಾರೆ ಶೇ.71.48 ರಷ್ಟು ಮತದಾನವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 18 ಸ್ಥಾನಗಳಿಗೆ ಶೇ.76.47ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಮೊದಲ ಹಂತದಲ್ಲಿ ಮತ್ತೆರಡು ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಗೊಂಡಿವೆ. ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂತು.
ಮೊದಲ ಹಂತದ 20 ವಿಧಾನಸಭಾ ಸ್ಥಾನಗಳ ಪೈಕಿ 10 ವಿಧಾನಸಭಾ ಕ್ಷೇತ್ರಗಳನ್ನು ಸೂಕ್ಷ್ಮ ವರ್ಗದಲ್ಲಿ ಇರಿಸಲಾಗಿತ್ತು. ಆದ್ದರಿಂದ, ಇಲ್ಲಿ ಮತದಾನದ ಸಮಯವನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ನಿಗದಿಪಡಿಸಲಾಗಿತ್ತು. ಈ ಸ್ಥಾನಗಳ ಪೈಕಿ ಮೊಹ್ಲಾ-ಮಾನ್‌ಪುರ, ಅಂತಗಢ, ಭಾನುಪ್ರತಾಪುರ್, ಕಂಕೇರ್, ಕೇಶ್ಕಲ್, ಕೊಂಡಗಾಂವ್, ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಟಾದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಿತು. ಪಂಡಾರಿಯಾ, ಕವರ್ಧಾ, ಖೈರಗಢ, ಡೊಂಗರ್‌ಗಢ, ರಾಜನಂದಗಾಂವ್, ಡೊಂಗರ್‌ಗಾಂವ್, ಖುಜ್ಜಿ, ಬಸ್ತಾರ್, ಜಗದಲ್‌ಪುರ ಮತ್ತು ಚಿತ್ರಕೋಟೆಯಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆದಿದ್ದು, ಮತದಾನ ನಡೆದ 20 ಸ್ಥಾನಗಳ ಪೈಕಿ 12 ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 25 ಮಹಿಳೆಯರು ಸೇರಿದಂತೆ ಒಟ್ಟು 223 ಅಭ್ಯರ್ಥಿಗಳು ಕಣದಲ್ಲಿದ್ದರು.
ಭಾರತದ ಚುನಾವಣಾ ಆಯೋಗದ ಮತದಾನದ ಆ್ಯಪ್‌ನ ಪ್ರಕಾರ, ಭಾನುಪ್ರತಾಪುರ್‌ನಲ್ಲಿ ಅತಿ ಹೆಚ್ಚು ಶೇ 79.1 ಮತದಾನವಾಗಿದೆ, ನಂತರದ ಸ್ಥಾನಗಳಲ್ಲಿ ಅಂತಗಢ (ಶೇ. 78.04), ಡೊಂಗರಗಢ (ಶೇ. 77.4), ಡೊಂಗರಗಾಂವ್ (ಶೇ. 76.8), ಖೈರಗಢ (ಶೇ. 76.31), ಕೊಂಡಗಾಂವ್ (ಶೇ. 76.29), ಕಂಕೇರ್ (ಶೇ. 76.13), ಮೊಹ್ಲಾ-ಮಾನ್‌ಪುರ (ಶೇ. 76), ಜಗದಲ್‌ಪುರ (ಶೇ. 75), ಕವರ್ಧಾ (ಶೇ. 74.89) ಕೇಶ್ಕಲ್ (ಶೇ. 74.49), ರಾಜನಂದಗಾಂವ್ (ಶೇ. 74), ಪಂಡರಿಯಾ (ಶೇ 73.67), ಖುಜ್ಜಿ (ಶೇ 72.01), ಬಸ್ತಾರ್ (ಶೇ 71.39) ಚಿತ್ರಕೋಟ್ (ಶೇ 70.36), ದಾಂತೇವಾಡ (ಶೇ 67.71), ನಾರಾಯಣಪುರ (ಶೇ 63.88), ಕೊಂಟಾ (ಶೇ 50.12) ಮತ್ತು ಬಿಜಾಪುರ (ಶೇ. 40.98 ಶೇ.) ಮತದಾನವಾಗಿದೆ. ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಮತದಾರರ ಪಟ್ಟಿಯ ಪ್ರಕಾರ, ಮೊದಲ ಹಂತದಲ್ಲಿ 40,78,681 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಮಂಗಳವಾರ ಮತದಾನ ನಡೆದ 20 ಕ್ಷೇತ್ರಗಳ ಪೈಕಿ 2018ರಲ್ಲಿ 17ರಲ್ಲಿ ಕಾಂಗ್ರೆಸ್ ಹಾಗೂ 2 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಐದು ವರ್ಷಗಳ ಹಿಂದೆ ರಾಜ್ಯದ ಒಟ್ಟು 90 ಸ್ಥಾನಗಳಲ್ಲಿ 68 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಕೇಸರಿ ಪಕ್ಷ ಕೇವಲ 15 ಸ್ಥಾನ ಗೆದ್ದುಕೊಂಡಿತ್ತು.
ಮಿಜೋರಾಂ ವಿಧಾನಸಭಾ ಚುನಾವಣೆ: ಮಿಜೋರಾಂ ರಾಜ್ಯದ 40 ವಿಧಾನಸಭಾ ಸ್ಥಾನಗಳಿಗೆ ನಡೆದ ಒಂದೇ ಹಂತದ ಚುನಾವಣೆಯಲ್ಲಿ ಶೇ 78.40 ರಷ್ಟು ಮತದಾನವಾಗಿದೆ. ಸೆರ್ಚಿಪ್ ಸೀಟಿನಲ್ಲಿ ಶೇ 84.78, ಮಮಿತ್ನಲ್ಲಿ ಶೇ 84.23, ಹ್ನಾಥಿಯಾಲ್ ಶೇ 84.16, ಕೊಲಾಸಿಬ್ನಲ್ಲಿ ಶೇ 82.77 ಮತ್ತು ಖಾಜಾಜಾಲ್ ಶೇ 82.39 ರಷ್ಟು ಮತದಾನವಾಗಿದೆ. ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು.
ಇದನ್ನೂ ಓದಿ:ಪಂಚರಾಜ್ಯ ಚುನಾವಣೆ : ಜೀವನದಲ್ಲೇ ಮೊದಲ ಬಾರಿಗೆ ಮತದಾನ ಮಾಡಿದ 93 ವರ್ಷದ ಶೇರ್ಸಿಂಗ್!