ಕೃಷ್ಣಗಿರಿ(ತಮಿಳುನಾಡು): ದೃಷ್ಟಿಹೀನ ವ್ಯಕ್ತಿಯೊಬ್ಬರು ಚಲಾವಣೆಯಲ್ಲಿ ಇಲ್ಲದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದೆ.
ಭಿಕ್ಷೆ ಬೇಡಿ ಸಂಗ್ರಹಿಸಿದ 500, 1,000 ಹಳೆಯ ನೋಟು ವಿನಿಮಯ ಮಾಡಿಕೊಡುವಂತೆ ಭಿಕ್ಷುಕನಿಂದ ಅರ್ಜಿ!
ಭಿಕ್ಷೆ ಬೇಡಿ ಉಳಿತಾಯ ಮಾಡಿದ್ದ 65,000 ರೂ. ಮೌಲ್ಯದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ವಿಶೇಷಚೇತನ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಪಾವಕ್ಕಲ್ ಪಂಚಾಯತ್‌ನ ಚಿನ್ನ ಕೌಂಟನೂರು ಗ್ರಾಮದ ಚಿನ್ನಕಣ್ಣು ಎಂಬಾತ ಡಿಸಿಗೆ ಮನವಿ ಸಲ್ಲಿಸಿದ ವಿಶೇಷಚೇತನ. ಈತ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದು, ಒಟ್ಟು 65,000 ರೂ. ವಿನಿಮಯ ಮಾಡಿಕೊಡುವಂತೆ ಅರ್ಜಿ ಹಾಕಿದ್ದಾನೆ.
ಈ ಅರ್ಜಿಯಲ್ಲಿ "ನಾನು ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದೇನೆ. ಅನಾರೋಗ್ಯದ ಕಾರಣ ಕಳೆದ ಕೆಲವು ವರ್ಷಗಳಿಂದ ನಾನು ಉಳಿತಾಯ ಮಾಡಿದ ಹಣವನ್ನು ಇಟ್ಟಿರುವ ಜಾಗದ ಬಗ್ಗೆ ಮರೆತು ಹೋಗಿದ್ದೆ. ಹಾಗಾಗಿ, ಅಮಾನ್ಯೀಕರಣ ಮಾಡಿದ ವೇಳೆ ನನಗೆ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಬಳಿ ಇರುವ ಉಳಿತಾಯದ ಮೊತ್ತವನ್ನು ದಯವಿಟ್ಟು ವಿನಿಮಯ ಮಾಡಿಕೊಡಿ' ಎಂದು ಕೋರಿಕೊಂಡಿದ್ದಾರೆ.