ಮುಂಬೈ, ಮಹಾರಾಷ್ಟ್ರ: ವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆಗಳು ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಇಟಲಿಯ 45 ವರ್ಷದ ಮಹಿಳೆಯೊಬ್ಬರು ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿರುವುದು ತಿಳಿದುಬಂದಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ವಿಮಾನದಲ್ಲಿ ಅರೆಬೆತ್ತಲೆಯಾಗಿ ಸಂಚರಿಸುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವಂತೆ ವರ್ತಿಸಿರುವ ಘಟನೆ ನಡೆದಿದೆ. ಹೀಗೆ ಅರೆಬೆತ್ತಲಾಗಿ ಓಡಾಡಿದ ಮಹಿಳೆಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಸೋಮವಾರ (ಜನವರಿ 30) ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಎಕಾನಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡ ಮಹಿಳೆಯೊಬ್ಬರು ಬ್ಯುಸಿನೆಸ್ ಕ್ಲಾಸ್ ನಲ್ಲಿ ಕೂರುವುದಾಗಿ ಹಠ ಹಿಡಿದಿದ್ದರು ಎನ್ನಲಾಗಿದೆ. ಅದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಅಷ್ಟೇ ಅಲ್ಲ ಆ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಳಿಕ ವಿಮಾನದಲ್ಲಿ ಅರೆಬೆತ್ತಲೆಯಾಗಿ ಹಿಂದೆ ಮುಂದೆ ಸಂಚರಿಸಿದ್ದಾರೆ ಎಂಬ ಗಂಭೀರ ಆರೋಪ ಕೂಡಾ ಕೇಳಿ ಬಂದಿದೆ.
ಪ್ರಕರಣದ ಬಗ್ಗೆ ವಿಸ್ತಾರ ವಿಮಾನಯಾನ ಸಂಸ್ಥೆ ಹೇಳಿದ್ದಿಷ್ಟು:ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕಿವಿಗೊಡದ ಕಾರಣ ಕ್ಯಾಪ್ಟನ್ ವಾರ್ನಿಂಗ್ ಕಾರ್ಡ್ ನೀಡಿದ್ದಾರೆ. ನಂತರ ಸಿಬ್ಬಂದಿ ಮಹಿಳೆಯನ್ನು ತಡೆದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ ಅವರನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಆ ನಂತರ ಮುಂಬೈ ಪೊಲೀಸರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಮಹಿಳೆ ಅನುಚಿತ ಮತ್ತು ಹಿಂಸಾತ್ಮಕ ನಡವಳಿಕೆಯಿಂದಾಗಿ ಆ ಮಹಿಳಾ ಪ್ರಯಾಣಿಕರನ್ನು ಬಂಧಿಸಬೇಕಾಯಿತು. ಆ ಬಳಿಕ ನಿಯಮಾನುಸಾರ ಘಟನೆಯ ಕುರಿತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ವಿಸ್ತಾರಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.