ಆಗ್ರಾ: ಇಲ್ಲಿನ ಎಸ್ಎನ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿವೆ ಎನ್ನಲಾದ ಎರಡು ಘಟನೆಗಳ ದೃಶ್ಯಗಳು ಈಗ ಸೋಶಿಯಲ್ಲ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಂಥವರ ಮನಸ್ಸನ್ನೂ ಕಲಕುವಂತಿವೆ. ಕೋವಿಡ್ ನಿರ್ವಹಣೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತಿವೆ ಈ ದೃಶ್ಯಗಳು.
ಜೀವನ ಸಂಗಾತಿಗಳ ಜೀವ ಉಳಿಸಲು ಹರಸಾಹಸ.. ಕರುಣೆ ತೋರದ ಕೊರೊನಾ - ಕರುಣೆ ಇಲ್ಲದ ಕೊರೊನಾ
ಆಗ್ರಾದ ಎಸ್ಎನ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಎರಡು ಘಟನೆಗಳು ಕೋವಿಡ್ ಮಹಾಮಾರಿಯ ಭೀಕರತೆಗೆ ಸಾಕ್ಷಿಯಾಗಿವೆ. ಜೀವನ ಸಂಗಾತಿಗಳ ಜೀವ ಉಳಿಸಲು ಪರದಾಡುವ ಸಂಗಾತಿಗಳ ಪ್ರಯತ್ನ ಎಂಥವರ ಮನಸ್ಸನ್ನೂ ಒಂದು ಕ್ಷಣ ಕಲಕುವಂತಿವೆ.
ಪತ್ನಿಯೋರ್ವಳು ತನ್ನ ಕೋವಿಡ್ ಸೋಂಕಿತ ಪತಿಯ ಬಾಯಿಗೆ ಬಾಯಿ ಇಟ್ಟು ಆಕ್ಸಿಜನ್ ನೀಡಲು ಪ್ರಯತ್ನಿಸುತ್ತಿರುವ ಒಂದು ಚಿತ್ರ ನೋಡಿದರೆ ಕರುಳು ಕಿತ್ತು ಬರುವಂತಾಗುತ್ತದೆ. ಆಟೋ ರಿಕ್ಷಾವೊಂದರಲ್ಲಿ ಪತಿಯನ್ನು ಚಿಕಿತ್ಸೆಗಾಗಿ ಕರೆದುಕೊಂಡ ಬಂದ ಪತ್ನಿಯು, ಪತಿಯ ಬಾಯಿಗೆ ಬಾಯಿ ಇಟ್ಟು ಆಕ್ಸಿಜನ್ ನೀಡಿ ಆತನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಒಂದು ದೃಶ್ಯ ಮಮ್ಮಲ ಮರುಗಿಸುವಂತಿದೆ. ಇಷ್ಟಾದರೂ ಪತಿ ಸಾಯುವುದು ಇನ್ನೂ ಘನಘೋರ.
ಇನ್ನೊಂದು ಚಿತ್ರದಲ್ಲಿ ಪತಿಯೊಬ್ಬ ಕೋವಿಡ್ ಸೋಂಕಿತ ಪತ್ನಿಯನ್ನು ಕೈಗಾಡಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆತರುವ ದೃಶ್ಯ ಸೆರೆಯಾಗಿದೆ. ಆ್ಯಂಬುಲೆನ್ಸ್ ಸಿಗದೆ ಆತ ಪತ್ನಿಯ ಜೀವ ಉಳಿಸಲು ಕೈಗೆ ಸಿಕ್ಕ ಕೈಗಾಡಿಯಲ್ಲಿ ಆಕೆಯನ್ನು ಹಾಕಿಕೊಂಡು ಬಂದಿದ್ದಾನೆ. ಈ ಎರಡು ದೃಶ್ಯಗಳು ಆಗ್ರಾ ಜಿಲ್ಲಾಡಳಿತದ ಕಾರ್ಯವೈಖರಿಯ ಮೇಲೆ ಪ್ರಶ್ನೆಚಿಹ್ನೆಯನ್ನು ಮೂಡಿಸಿವೆ.