ನವದೆಹಲಿ: ಗಡಿ ವಿವಾದದ ನಡುವೆ ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಕ್ರಮ್ ಮಿಶ್ರಿ ಅವರನ್ನು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.
ವಿಕ್ರಮ್ ಮಿಶ್ರಿ ಅವರು 1989ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದು, ಮಾಜಿ ಪ್ರಧಾನಿಗಳಾದ ಐ.ಕೆ.ಗುಜ್ರಾಲ್, ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು.
ಮೂಲತಃ ಶ್ರೀನಗರದವರಾದ 57 ವರ್ಷದ ಮಿಶ್ರಿ, ಮ್ಯಾನ್ಮಾರ್, ಸ್ಪೇನ್ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ-ಚೀನಾದ ಸಂಬಂಧ ಬಿಕ್ಕಟ್ಟಿನಿಂದ ಕೂಡಿದ್ದಾಗ 2019ರಿಂದ ಬೀಜಿಂಗ್ನಲ್ಲಿ ರಾಯಭಾರಿಯಾಗಿದ್ದರು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸೇವೆ ಸಲ್ಲಿಸಿರುವ ವಿಕ್ರಮ್ ಮಿಶ್ರಿ, ಯೂರೋಪ್, ಆಫ್ರಿಕಾ ಹಾಗೂ ಉತ್ತರ ಅಮೆರಿಕದಲ್ಲಿ ಭಾರತದ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಶ್ರೀನಗರದಲ್ಲಿ ಹುಟ್ಟಿ ಬೆಳೆದ ಇವರು ಸಿಂಧಿಯಾ ಸ್ಕೂಲ್ ವಿದ್ಯಾರ್ಥಿ. ದೆಹಲಿ ಹಿಂದೂ ಕಾಲೇಜ್ನಲ್ಲಿ ಪದವಿ ಬಳಿಕ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಮೊದಲು ಅವರು ಜಾಹಿರಾತು ಮತ್ತು ಸಿನಿಮಾ ತಯಾರಿಕೆಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ಡಾಲಿ ಮಿಶ್ರಿ ಅವರನ್ನು ವಿವಾಹ ಆಗಿರುವ ವಿಕ್ರಮ್ ಮಿಶ್ರಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರದೀಪ್ ಕುಮಾರ್ ರಾವತ್ ಚೀನಾ ರಾಯಭಾರಿ:
ಮಿಕ್ರಮ್ ಮಿಶ್ರಿ ಅವರಿಂದ ತೆರವಾಗಿರುವ ಚೀನಾ ರಾಯಭಾರಿ ಸ್ಥಾನಕ್ಕೆ 1990ರ ಐಎಫ್‌ಎಸ್‌ನ ಅಧಿಕಾರಿ ಪ್ರದೀಪ್ ಕುಮಾರ್ ರಾವತ್ ಅವರನ್ನು ಈ ತಿಂಗಳ ಆರಂಭದಲ್ಲಿ ನೇಮಿಸಲಾಗಿತ್ತು. ನಿರರ್ಗಳವಾಗಿ ಮಾತನಾಡುವ ರಾವತ್, ನೆದರ್‌ಲ್ಯಾಂಡ್‌ಗೆ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಡುವೆಯೇ ಅವರಿಗೆ ದೊರೆತ ಈ ಉನ್ನತ ಹುದ್ದೆ ದೊಡ್ಡ ಸವಾಲಿನದ್ದಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಶಸ್ತ್ರಸಜ್ಜಿತ ಅಪ್‌ಗ್ರೇಡೆಡ್ ಕಾರು: ಬೆಲೆ, ವಿಶೇಷತೆ ಹೀಗಿದೆ..