ನವದೆಹಲಿ:ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದಲ್ಲಿ ಜನವರಿ 22ರ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಭಾಗವಾಗುವಂತೆ ದೇಶ ಮತ್ತು ವಿದೇಶಗಳಲ್ಲಿನ 10 ಕೋಟಿಗೂ ಅಧಿಕ ಹಿಂದು ಕುಟುಂಬಗಳಿಗೆ ಮನವಿ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ ತಿಳಿಸಿದೆ.
ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಎಚ್‌ಪಿ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಇತರ ಹಿಂದೂ ಸಂಘಟನೆಗಳೊಂದಿಗೆ ಸೇರಿ ಜನವರಿ 1 ರಿಂದ 15 ರವರೆಗೆ ದೇಶದ ವಿವಿಧ ನಗರಗಳು, ಹಳ್ಳಿಗಳಲ್ಲಿನ ಹಿಂದೂ ಕುಟುಂಬಗಳನ್ನು ಭೇಟಿ ಮಾಡಿ 'ಶ್ರೀರಾಮನ ಪಟ್ಟಾಭಿಷೇಕ' ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಲಾಗುವುದು ಎಂದರು.
10 ಕೋಟಿಗೂ ಅಧಿಕ ಹಿಂದು ಕುಟುಂಬಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಜೊತೆಗೆ ಪ್ರತಿ ಕುಟುಂಬಕ್ಕೆ ಭಗವಾನ್ ಶ್ರೀರಾಮ, ಭವ್ಯ ಮಂದಿರದ ಚಿತ್ರ ಮತ್ತಿತರ ಅಗತ್ಯ ಮಾಹಿತಿಯ ಕೈಪಿಡಿಯನ್ನು ನೀಡಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದಕ್ಕೆ ಅನುಮತಿ ನೀಡಿದೆ. ವಿದೇಶದಲ್ಲಿರುವ ಹಿಂದೂಗಳಿಗೂ ಇದನ್ನು ತಲುಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಯೋಧ್ಯೆಗೆ ಆಹ್ವಾನವಲ್ಲ, ಊರಲ್ಲೇ ಪೂಜಿಸಿ:ಹಿಂದು ಕುಟುಂಬಗಳನ್ನು ಭೇಟಿ ಮಾಡಿ ನೀಡಲಾಗುವ ಆಹ್ವಾನ ಅಯೋಧ್ಯೆಗೆ ಬರಲು ಅಲ್ಲ, ಅವರಿದ್ದ ಊರಲ್ಲೇ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಜನರು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿದೆ. ರಾಮನ ಪಟ್ಟಾಭಿಷೇಕದ ಹಿನ್ನೆಲೆ ನವೆಂಬರ್ 5 ರಿಂದಲೇ ಭಕ್ತಿಯ 'ಅಕ್ಷತ ಕಲಶ'ವನ್ನು ಈಗಾಗಲೇ ದೇಶಾದ್ಯಂತ ಕಳುಹಿಸಲಾಗಿದೆ. ವಿಎಚ್‌ಪಿ ತಂಡಗಳು ಹಿಂದೂಗಳ ಕುಟುಂಬಗಳ ಭೇಟಿಯ ವೇಳೆ ಭಕ್ತರಿಂದ ಯಾವುದೇ ಉಡುಗೊರೆ, ದೇಣಿಗೆ ಅಥವಾ ಇತರ ವಸ್ತುಗಳನ್ನು ಸ್ವೀಕರಿಸುವುದಿಲ್ಲ. ಈ ಬಾರಿ ನಾವು ಸಮಾಜದಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಬದಲಿಗೆ ರಾಮನ ಪೂಜೆಯಲ್ಲಿ ತೊಡಗಲು ಮಾತ್ರ ಕೋರಲಾಗುವುದು ಎಂದರು.