ನವದೆಹಲಿ :ವಾಹನ ಸ್ಕ್ರ್ಯಾಪಿಂಗ್ ನೀತಿಯು "ವಿನ್-ವಿನ್"(ಇಬ್ಬರಿಗೂ ಲಾಭದಾಯಕ) ನೀತಿಯಾಗಿದ್ದು, ಇದು ಇಂಧನ ದಕ್ಷತೆಯನ್ನು ಸುಧಾರಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಾಹನ ಸ್ಕ್ರ್ಯಾಪಿಂಗ್ ನೀತಿಗೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್‌ಎಂಇಗಳ ಸಚಿವರು, ಈ ನೀತಿಯು ದೇಶದ ವಾಹನ ಉದ್ಯಮದ ವಹಿವಾಟು ಪ್ರಸ್ತುತ 4.5 ಲಕ್ಷ ಕೋಟಿ ರೂ.ಗಳಿಂದ 10 ಲಕ್ಷ ಕೋಟಿಗೆ ಹೆಚ್ಚಿಸಲು ಕಾರಣವಾಗುತ್ತದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ 2021-22ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ ಈ ನೀತಿ ಪ್ರಕಾರ, ಖಾಸಗಿ ವಾಹನಗಳಿಗೆ 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ಬಳಿಕ ಫಿಟ್‌ನೆಸ್ ಪರೀಕ್ಷೆ ಮಾಡುವುದು ಕಡ್ಡಾಯ. ವಾಹನ ತಯಾರಕರಿಗೂ ಸಲಹೆ ನೀಡಿದ ಸಚಿವ ಗಡ್ಕರಿ, ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ನೀಡಿದ ನಂತರ ಹೊಸ ವಾಹನವನ್ನು ಖರೀದಿಸುವವರಿಗೆ ಶೇ. 5ರಷ್ಟು ರಿಯಾಯಿತಿ ನೀಡುವಂತೆ ತಿಳಿಸಿದರು.
ಇದು "ವಿನ್-ವಿನ್" ನೀತಿಯಾಗಲಿದೆ ಎಂದ ಸಚಿವರು, ಇಂಧನ ದಕ್ಷತೆಯನ್ನು ಸುಧಾರಿಸಲು, ಮಾಲಿನ್ಯವನ್ನು ಕಡಿಮೆ ಮಾಡಲು ಹೊಸ ನೀತಿ ಸಹಾಯ ಮಾಡಲಿದೆ ಮತ್ತು ಹೊಸ ವಾಹನಗಳ ಖರೀದಿಯಿಂದಾಗಿ ಜಿಎಸ್ಟಿ ಆದಾಯವೂ ಹೆಚ್ಚಾಗಲಿದೆ ಎಂದರು.
ಇದನ್ನೂಓದಿ: ಪ್ರಯಾಣಿಕರೇ ಹುಷಾರು! ವಿಮಾನಯಾನ ಸಂಸ್ಥೆಗಳಿಂದ ಕಟ್ಟುನಿಟ್ಟಿನ ಕ್ರಮ ಜಾರಿ
ಹಳೆಯ ಮತ್ತು ದೋಷಯುಕ್ತ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ವಾಯು ಮಾಲಿನ್ಯ ತಡೆಗಟ್ಟುವುದು, ರಸ್ತೆ ಮತ್ತು ವಾಹನ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ಜೊತೆಗೆ, ಇದು ಉತ್ತಮ ಇಂಧನ ದಕ್ಷತೆಯನ್ನು ಸಾಧಿಸಲು, ವಾಹನ ಸ್ಕ್ರ್ಯಾಪಿಂಗ್ ಉದ್ಯಮವನ್ನು ಅಭಿವೃದ್ದಿ ಮಾಡಲು, ಆಟೋಮೋಟಿವ್, ಸ್ಟೀಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಕಡಿಮೆ ಬೆಲೆಯ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡುವ ಮೂಲಕ ಪ್ಲಾಸ್ಟಿಕ್, ತಾಮ್ರ, ಅಲ್ಯೂಮಿನಿಯಂ, ಸ್ಟೀಲ್ ಮತ್ತು ರಬ್ಬರ್‌ನಂತಹ ಕಚ್ಚಾ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತದೆ. ಇದು ವೆಚ್ಚ ತಗ್ಗಿಸುತ್ತದೆ ಮತ್ತು ಉದ್ಯಮ ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮುಂದಿನ ಕೆಲವು ವಾರಗಳಲ್ಲಿ ಸ್ಟೇಕ್ ಹೋಲ್ಡರ್ಸ್ಗಳ ಅಭಿಪ್ರಾಯಗಳಿಗಾಗಿ ಕರಡು ಅಧಿಸೂಚನೆಯನ್ನು ಪ್ರಕಟಿಸಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
20 ವರ್ಷಕ್ಕಿಂತ ಹಳೆಯದಾದ 51 ಲಕ್ಷ ಲಘು ಮೋಟಾರು ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ 34 ಲಕ್ಷ ಲಘು ಮೋಟಾರು ವಾಹನಗಳಿವೆ. ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದ 15 ವರ್ಷಕ್ಕಿಂತ ಹಳೆಯದಾದ ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.