ಪಿಲಿಭಿತ್(ಉತ್ತರ ಪ್ರದೇಶ):ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದು, ಇಲ್ಲಿಯವರೆಗೆ 1200ಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನ ವಾಪಸ್ ಕರೆತರುತ್ತಿರುವ ಕೇಂದ್ರ ಸರ್ಕಾರ ಅದನ್ನ ಇದೊಂದು ಅವಕಾಶವಾದ ಎಂದುಕೊಳ್ಳಬಾರದು. ಬದಲಿಗೆ ಇದೊಂದು ರಾಜತಾಂತ್ರಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ವರುಣ್ ಗಾಂಧಿ, ಉಕ್ರೇನ್ನಲ್ಲಿ 15,000 ಕ್ಕೂ ಅಧಿಕ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದು, ಇವರ ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಸರಿಯಾದ ಸಮಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಅವರನ್ನ ರಕ್ಷಣೆ ಮಾಡುವುದು ಅವಕಾಶವಾದ ಎಂದುಕೊಳ್ಳುವ ಬದಲಾಗಿ ಅದೊಂದು ರಾಜತಾಂತ್ರಿಕ ಜವಾಬ್ದಾರಿಯಾಗಿದೆ ಎಂಬ ನಿರ್ಧಾರಕ್ಕೆ ಬರಬೇಕು ಎಂದಿದ್ದಾರೆ.
ಇದನ್ನೂ ಓದಿರಿ:ಬರೋಬ್ಬರಿ 3.5 ಲಕ್ಷ ರೂ.ಗೆ ಹರಾಜುಗೊಂಡ ಹುಂಜ.. ಅಂತಹದ್ದು ಏನಿದೆ ಇದರಲ್ಲಿ!?
ಕಳೆದ ಕೆಲ ತಿಂಗಳಿಂದ ತಮ್ಮದೇ ಪಕ್ಷದ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಈಗಾಗಲೇ ಕೃಷಿ ಕಾಯ್ದೆ, ರೈತರ ಮೇಲಿನ ದೌರ್ಜನ್ಯ ಸೇರಿದಂತೆ ಅನೇಕ ವಿಚಾರಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.