ಕರ್ನಾಟಕ

karnataka

By

Published : Feb 14, 2021, 11:53 AM IST

ETV Bharat / bharat

ಬ್ರಿಟಿಷ್ ದಂಪತಿಯ ಅಮರ ಪ್ರೇಮಕಥೆ: ಸಮಾಧಿಯೊಳಗೂ ಉಸಿರಾಡುತ್ತಿದೆ ಇವರ ಪ್ರೀತಿ!

ಕೌಟುಂಬಿಕ ಮೌಲ್ಯಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೂರಾರು ವರ್ಷಗಳ ಹಿಂದೆ ಬದುಕಿ ಬಾಳಿದ ಬ್ರಿಟಿಷ್​ ದಂಪತಿ, ತಮ್ಮ ನಿಷ್ಕಲ್ಮಶ ಪ್ರೇಮದಿಂದ ಇಂದಿಗೂ ಅಪ್ರತಿಮ ಪ್ರೇಮಕಥೆಯಾಗಿ ಉಳಿದಿದ್ದಾರೆ. ಇವರು ಸಮಾಧಿಯಾದ ಬಳಿಕವೂ ಇವರ ಪ್ರೇಮ ನಹಾನ್​ ಪಟ್ಟಣದ ಜನರಿಗೆ ಪ್ರೇಮಪುಸ್ತಕವಾಗಿ ಒಲವೆಂದರೇನು ಎಂದು ಸಾರುತ್ತಿದೆ.

Immortal love story of a British couple
ಬ್ರಿಟಿಷ್ ದಂಪತಿಯ ಅಮರ ಪ್ರೇಮಕಥೆ

ನಹಾನ್:ಹಿಮಾಚಲ ಪ್ರದೇಶದ 400 ವರ್ಷ ಹಳೆಯ ಪಟ್ಟಣವಾದ ನಹಾನ್ ಒಂದು ಅವಿಸ್ಮರಣೀಯ ಪ್ರೇಮಕ್ಕೆ ಸಾಕ್ಷಿಯಾಗಿದ್ದು, ಇತಿಹಾಸದ ಪುಟಗಳಲ್ಲಿ ನವಿರಾದ ಪ್ರೇಮಕಥೆಯಾಗಿ ದಾಖಲಾಗಿದೆ. ನಹಾನ್ ಪರ್ವತಗಳಲ್ಲಿ ಸಮಾಧಿಯಾದ ಬ್ರಿಟಿಷ್​​ ದಂಪತಿಯ ಈ ಅದ್ಭುತ ಕಥೆ, ಪ್ರೀತಿ ಮತ್ತು ಬದ್ಧತೆಯು ಸಂಬಂಧಗಳಲ್ಲಿ ಬಹುಮುಖ್ಯ ಎಂಬ ಸಂದೇಶವನ್ನು ಸಾರಿ ಹೇಳುತ್ತದೆ.

ಬ್ರಿಟಿಷರ ಆಳ್ವಿಕೆ ಸಮಯದಲ್ಲಿ, ಲೂಸಿಯಾ ಹಾಗೂ ಡಾ. ಎಡ್ವಿನ್ ಪಿಯರ್ಸಲ್ ನಹಾನ್‌ನಲ್ಲಿ ವಾಸಿಸುತ್ತಿದ್ದರು. ಲೂಸಿಯಾ ಪತಿ ಡಾ. ಎಡ್ವಿನ್ ಅವರು ನಹಾನ್ ಮಹಾರಾಜರ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ 1883ರ ನವೆಂಬರ್ 19 ರಂದು ಡಾ. ಎಡ್ವಿನ್ ತಮ್ಮ 50ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ಮಹಾರಾಜರು ಡಾ. ಪಿಯರ್ಸಲ್‌ರನ್ನು ಐತಿಹಾಸಿಕ ವಿಲ್ಲಾದ ಉತ್ತರ ಭಾಗದಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಸಮಾಧಿ ಮಾಡಿದರು. ಈ ಸ್ಥಳವನ್ನು ಡಾ. ಪಿಯರ್ಸಲ್ ಅವರೇ ಆಯ್ಕೆ ಮಾಡಿಕೊಂಡಿದ್ದರು. ಮರಣದ ನಂತರ ನನ್ನನ್ನು ಇಲ್ಲಿಯೇ ಸಮಾಧಿ ಮಾಡಬೇಕೆಂದು ಪಿಯರ್ಸಲ್ ಮೊದಲೇ ಹೇಳಿದ್ದರು.

ಬ್ರಿಟಿಷ್​ ಅಧಿಕಾರಿಯಾಗಿ ಸಾಕಷ್ಟು ಹೆಸರುಗಳಿಸಿದ್ದ ಲೂಸಿಯಾ ಸಹ ಪತಿಯಂತೆ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಆದರೆ ಪ್ರೀತಿಯ ಪತಿಯ ಅಗಲುವಿಕೆಯಿಂದ 49 ವರ್ಷದ ಲೂಸಿಯಾ ದುಃಖತಪ್ತರಾದರು. ಪತಿ ಡಾ. ಪಿಯರ್ಸಲ್ ಪ್ರೀತಿಯನ್ನು ನೆನೆದು ದಿನವೂ ಭಾವುಕರಾಗುತ್ತಿದ್ದರು. ಇನ್ನು ಲೂಸಿಯಾ ತನ್ನ ಗಂಡನ ಮರಣದ ನಂತರ ಇಂಗ್ಲೆಂಡ್‌ಗೆ ಹಿಂತಿರುಗಲಿಲ್ಲ. ತಮ್ಮ ಕುಟುಂಬದ ಸದಸ್ಯರಿಂದ ದೂರವಾಗಿ ನಹಾನ್​ನಲ್ಲೆ ಉಳಿದುಬಿಟ್ಟರು.

ಕೊನೆಗೆ ಅಕ್ಟೋಬರ್ 19, 1921 ರಂದು ಲೂಸಿಯಾ ಕೊನೆಯುಸಿರೆಳೆದರು. ಲೂಸಿಯಾ ಈ ಮೊದಲೇ ಮಹಾರಾಜರ ಬಳಿ, ನಾನು ಅಸುನೀಗಿದ ನಂತರ ನನ್ನ ಪತಿ ಎಡ್ವಿನ್ ಪಿಯರ್ಸಲ್ ಸಮಾಧಿಯ ಬಳಿಯೇ ನನ್ನ ಸಮಾಧಿ ನಿರ್ಮಿಸಬೇಕೆಂದು ಹೇಳಿದ್ದರು. ಹೀಗಾಗಿ ಅವರ ಕೊನೆಯ ಆಸೆ ಪೂರೈಸಲು, ಮಹಾರಾಜರು ಡಾ. ಪಿಯರ್ಸಲ್ ಸಮಾಧಿಯ ಪಕ್ಕದಲ್ಲಿ ಲೂಸಿಯಾರವರ ಸಮಾಧಿಯನ್ನು ನಿರ್ಮಿಸಿದ್ರು. ಈಗ ದಿ ಗ್ರೇಟ್​ ಪಿಯರ್ಸಲ್ ದಂಪತಿ ಐತಿಹಾಸಿಕ ವಿಲ್ಲಾ ಆವರಣದಲ್ಲಿರುವ ಕ್ಯಾಥೊಲಿಕ್ ಸ್ಮಶಾನದಲ್ಲಿ ದೀರ್ಘ ಮೌನದಲ್ಲಿದ್ದಾರೆ. ಈ ದಂಪತಿಯ ಸಮಾಧಿಯು ಶ್ವೇತವರ್ಣದ ವಾಸ್ತುಶಿಲ್ಪ ಕಲೆಯಿಂದ ತುಂಬಿದ್ದು, ಅಮರ ಪ್ರೀತಿಯ ಕಥೆಯನ್ನು ಸಾರುತ್ತದೆ. ಈ ವಿಶಿಷ್ಟ ದಂಪತಿಯ ಸಮಾಧಿ ಕಂಡು ಅವರ ಪ್ರೀತಿಕಥೆಯನ್ನು ಕೇಳಲು ಪ್ರಪಂಚದಾದ್ಯಂತದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಈ ಕುರಿತು ಈಟಿವಿ ಭಾರತ್​ಗೆ ಮಾಹಿತಿ ನೀಡಿದ ರಾಜವಂಶಸ್ಥ ಕನ್ವರ್ ಅಜಯ್ ಬಹದ್ದೂರ್ ಸಿಂಗ್, ಈ ಬ್ರಿಟಿಷ್ ದಂಪತಿಯ ಪ್ರೇಮಕಥೆ ಗಮನಾರ್ಹ ಮತ್ತು ಕೊನೆಯಿಲ್ಲದ್ದು ಎಂದು ಬಣ್ಣಿಸಿದರು. ತನ್ನ ಗಂಡನ ಮರಣಾನಂತರ ಗಂಡನ ಪಕ್ಕದಲ್ಲೇ ತಾನೂ ಸಮಾಧಿ ಸೇರಲು ಲೂಸಿಯಾ 38 ವರ್ಷ ಕಾದಳು. ಮನೆಯವರ ಬಳಿ ತೆರಳದೇ ಪ್ರೀತಿಯ ಪತಿಗಾಗಿ ಇಲ್ಲಿಯೇ ಉಳಿದರು. ಇನ್ನು ಲೂಸಿಯಾ ಪತಿ ಡಾ. ಪಿಯರ್ಸಲ್ ಮುಖ್ಯ ವೈದ್ಯಕೀಯ ಅಧಿಕಾರಿ ಅಷ್ಟೇ ಅಲ್ಲದೇ ಅವರು ನಹಾನ್ ನಗರ ಸಭೆಯ ಅಧ್ಯಕ್ಷರೂ ಆಗಿದ್ದರು. ನಹಾನ್‌ನಲ್ಲಿ ಒಳಚರಂಡಿ ಕಲ್ಪನೆಯನ್ನು ರಾಜನಿಗೆ ಡಾ. ಪಿಯರ್ಸಲ್ ನೀಡಿದರು. ಅವರ ಕಲ್ಪನೆ ಆಧಾರದ ಮೇಲೆ ನಿರ್ಮಿಸಿದ ನಹಾನ್ ಪಟ್ಟಣದ ಯಾವುದೇ ರಸ್ತೆಗಳು ಹಾಳಾಗಿಲ್ಲ ಎಂದು ತಿಳಿಸಿದ್ರು.

ಇನ್ನು ಈ ಡಾ. ಪಿಯರ್ಸಲ್ ದಂಪತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಸ್ಥಳೀಯ ನಿವಾಸಿ ಜಿತೇಂದ್ರ ಠಾಕೂರ್ ಬ್ರಿಟಿಷ್ ದಂಪತಿಯ ಜೀವನ ಒಂದು ಅದ್ಭುತ ಪ್ರೇಮಕಥೆಯಾಗಿದ್ದು ಇದರಿಂದ ಪ್ರತಿಯೊಬ್ಬರೂ ಸ್ಫೂರ್ತಿ ಪಡೆಯಬೇಕು ಅಂತಾರೆ.

ಇದನ್ನೂ ಓದಿ:ಇಂದು ಪ್ರೇಮಿಗಳ ದಿನ: ಯಾಕೆ ಈ ದಿನ ಆಚರಿಸುತ್ತಾರೆ ಗೊತ್ತಾ?

ABOUT THE AUTHOR

...view details