ಖುಷಿನಗರ(ಉತ್ತರ ಪ್ರದೇಶ):ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಬಾವಿಗೆ ಬಿದ್ದು ಸುಮಾರು 13 ಮಂದಿ ಮಹಿಳೆಯರು, ಹುಡುಗಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
1. ಮದುವೆ ಸಮಾರಂಭ:ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ಸಮಾರಂಭಕ್ಕೆ ಒಂದು ದಿನ ಮೊದಲೇ ಕುಟುಂಬಸ್ಥರು ಮತ್ತು ಸಂಬಂಧಿಗಳು ಆಗಮಿಸಿದ್ದರು. ವಧು-ವರನಿಗೆ ಅರಿಶಿನ ಹಚ್ಚುವ ಕಾರ್ಯ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾವಿ ಪೂಜೆ ನೆರವೇರಿಸುತ್ತಿದ್ದಾಗ ದುರ್ಘಟನೆ ನಡೆಯಿತು.
2. ಬಾವಿ ಪೂಜೆ:ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ಮಹಿಳೆಯರು ಮತ್ತು ಹುಡುಗಿಯರು ಸೇರಿದಂತೆ ನೂರಾರು ಜನ ಬಾವಿಗೆ ಪೂಜೆ ಸಲ್ಲಿಸಲು ತೆರಳಿದ್ದಾರೆ. ಬಾವಿಯಲ್ಲಿ ನೀರು ತುಂಬಿತ್ತು. ಜನಸಂದಣಿ ಹೆಚ್ಚಾಗಿತ್ತು. ಹುಡುಗಿಯರು ಮತ್ತು ಮಹಿಳೆಯರು, ಮಕ್ಕಳು ಬಾವಿಯ ದಂಡೆಯ ಮೇಲೆ ಕುಳಿತುಕೊಂಡು ಪೂಜೆಯ ವಿಧಾನವನ್ನು ವೀಕ್ಷಿಸುತ್ತಿದ್ದರು.
3. ನಡೀತು ದುರಂತ: ಬಾವಿಯ ದಂಡೆ ದುರ್ಬಲವಾಗಿದ್ದರಿಂದ ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಬಾವಿಯೊಳಗೆ ಬಿದ್ದಿದ್ದಾರೆ. ಬಾವಿಯೊಳಗೆ ಬಿದ್ದ ತಮ್ಮ ಕುಟುಂಬಸ್ಥರನ್ನು ಕಾಪಾಡಲು ಒಬ್ಬರಂತೆ ಮತ್ತೊಬ್ಬರು ಮಹಿಳೆಯರು ಬಾವಿಗೆ ಹಾರಿದ್ದಾರೆ. ಹೀಗೆ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಬಾವಿಗೆ ಬಿದ್ದಿದ್ದಾರೆ.
4. 13 ಮಹಿಳೆಯರು ಸಾವು:ಸಂಭವಿಸಿದ ದುರಂತದಲ್ಲಿ ಸುಮಾರು 9 ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. 18ಕ್ಕೂ ಹೆಚ್ಚು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದರು.