ಗೋರಖ್ಪುರ(ಉತ್ತರ ಪ್ರದೇಶ):ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಇಂದು ಗೋರಖ್ಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಒಟ್ಟು ಆಸ್ತಿ ಎಷ್ಟು ಎಂಬುದರ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಐದು ಸಲ ಲೋಕಸಭೆ ಸಂಸದರಾಗಿ ಗೋರಖ್ಪುರ ಕ್ಷೇತ್ರ ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಮಾರ್ಚ್ 3ರಂದು ನಡೆಯಲಿರುವ ಚುನಾವಣೆಗೋಸ್ಕರ ಯೋಗಿ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಅಫಡವಿಟ್ನಲ್ಲಿ ಯೋಗಿ ಆದಿತ್ಯನಾಥ್ 1,54,94,054 ರೂಪಾಯಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆರು ಬ್ಯಾಂಕ್ ಖಾತೆ ಹೊಂದಿರುವುದಾಗಿ ಯೋಗಿ ತಿಳಿಸಿದ್ದು, ಅವರ ಕೈಯಲ್ಲಿ 12 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಇದೆ. ಉಳಿದಂತೆ 1 ಲಕ್ಷ ರೂ. ಮೌಲ್ಯದ ರಿವಾಲ್ವರ್ ಮತ್ತು 80 ಸಾವಿರ ರೂಪಾಯಿ ಮೌಲ್ಯದ ರೈಫಲ್ ಇರುವುದಾಗಿ ಘೋಷಿಸಿಕೊಂಡಿದ್ದಾರೆ.