ಅಜಂಗಢ (ಯುಪಿ):ಮಾಜಿ ಪ್ರೇಯಸಿಯ ಕತ್ತು ಹಿಸುಕಿ ಕೊಂದು ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಜಂಗಢ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಕುಮಾರ ಯಾದವ್ ಬಂಧಿತ ಆರೋಪಿ.
ಪ್ರಕರಣದ ವಿವರ:ನ.16ರಂದು ಜಿಲ್ಲೆಯ ಪಶ್ಚಿಮ್ಪಟ್ಟಿ ಗ್ರಾಮದ ಬಾವಿಯೊಂದರಲ್ಲಿ ಛಿದ್ರಗೊಂಡಿದ್ದ ಯುವತಿಯ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕ್ರೂರ ಹತ್ಯೆಯ ಹಿಂದಿನ ರಹಸ್ಯವನ್ನು ಅಜಂಗಢ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಸೆರೆಹಿಡಿದಿದ್ದಾರೆ. ಇಶಾಕ್‌ಪುರ ಗ್ರಾಮದ ಆರಾಧನಾ ಪ್ರಜಾಪತಿ (22) ಹತ್ಯೆಯಾದ ಯುವತಿಯಾಗಿದ್ದರು.
ಬಂಧಿತ ರಾಜಕುಮಾರ ಯಾದವ್ ಹಾಗೂ ಆರಾಧನಾ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಇದಕ್ಕೆ ಒಪ್ಪದ ಆರಾಧನಾ ಕುಟುಂಬ ಕಳೆದ ಫೆಬ್ರವರಿ ತಿಂಗಳಲ್ಲಿ ಬೇರೆ ಯುವಕನೊಂದಿಗೆ ಆಕೆಯ ವಿವಾಹ ನೆರವೇರಿಸಿದ್ದರಂತೆ. ಮದುವೆಯಾದ ಬಳಿಕ ಯುವತಿ ಅಜಂಗಢ ಜಿಲ್ಲೆಯ ಇಶಾಕ್ ಪುರ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಇದರಿಂದ ಕುಪಿತನಾದ ರಾಜಕುಮಾರ ತನ್ನ ಪೋಷಕರು ಹಾಗೂ ಸೋದರ ಸಂಬಂಧಿ ಸರ್ವೇಶ್ ಎಂಬಾತನ ಸಹಾಯದಿಂದ ಆರಾಧನಾಳ ಹತ್ಯೆಗೆ ಸಂಚು ರೂಪಿಸಿದ್ದನಂತೆ.
ಅದರಂತೆ ನ. 9 ರಂದು ಯಾದವ್ ಆರಾಧನಾಳನ್ನು ತನ್ನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದೊಯ್ದಿದ್ದ. ಅಲ್ಲಿಗೆ ತಲುಪಿದಾಗ ಸರ್ವೇಶ್‌ನ ಸಹಾಯದಿಂದ ಕಬ್ಬಿನ ಗದ್ದೆಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಇಬ್ಬರು ಆಕೆಯ ದೇಹವನ್ನು ಆರು ಭಾಗಗಳಾಗಿ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ತುಂಬಿ ಬಾವಿಗೆ ಎಸೆದಿದ್ದಾರೆ. ಅಲ್ಲದೇ ಆಕೆಯ ತಲೆಯನ್ನು ಸೋದರ ಸಂಬಂಧಿಗಳು ಸ್ವಲ್ಪ ದೂರದಲ್ಲಿದ್ದ ಕೊಳಕ್ಕೆ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗೆ ಗುಂಡೇಟು: ಏತನ್ಮಧ್ಯೆ, ಸ್ಥಳ ಮಹಜರು ವೇಳೆ ಆರೋಪಿ ತಪ್ಪಿಸಿಕೊಳ್ಕಲು ಯತ್ನಿಸಿದ್ದು, ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಪೊಲೀಸರು ಒಂದು ಹರಿತವಾದ ಆಯುಧ ಹಾಗೂ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧ ಕೃತ್ಯದಲ್ಲಿ ಯಾದವ್‌ಗೆ ಸಹಾಯ ಮಾಡಿದವರು ಎನ್ನಲಾದ ಸರ್ವೇಶ್, ಪ್ರಮೀಳಾ ಯಾದವ್, ಸುಮನ್, ರಾಜಾರಾಂ, ಕಲಾವತಿ, ಮಂಜು ಹಾಗೂ ಶೀಲಾ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ:ಯುಪಿಯಲ್ಲಿ ಭಯಾನಕ ಘಟನೆ: ತುಂಡು ತುಂಡಾಗಿ ಕತ್ತರಿಸಿ ಯುವತಿಯ ಬರ್ಬರ ಹತ್ಯೆ