ಉತ್ತರ ಪ್ರದೇಶ:ಇಲ್ಲಿನ ಶಹಜಹಾನ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ನೆರೆಹೊರೆಯವರೊಂದಿಗೆ ಜಗಳವಾಡಿದ ಕಾರಣಕ್ಕೆ ಪೋಷಕರನ್ನು ಪೊಲೀಸರು ಠಾಣೆಗೆ ಕರೆದೊಯ್ದರೆಂದು ಕೋಪಗೊಂಡ ಯುವಕ ತನ್ನ 31 ವರ್ಷದ ಸಹೋದರಿಗೆ ಬೆಂಕಿ ಹಚ್ಚಿಕೊಳ್ಳುವಂತೆ ಮನವೊಲಿಸಿದ್ದು, ಸಹೋದರನ ಮಾತನ್ನು ಕೇಳಿದ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸರೋಜ್ ಯಾದವ್ ಎಂಬಾಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವತಿ. ಆಕೆಯ ಸಹೋದರ ಸಂಜೀವ್ ಯಾದವ್ ಸಹೋದರಿಯ ಪ್ರಾಣ ಉಳಿಸುವ ಬದಲು ಸನಿಹದಲ್ಲಿ ನಿಂತು ವಿಡಿಯೋ ಮಾಡುವುದನ್ನೇ ಮುಂದುವರೆಸಿದ್ದಾನೆ. ಘಟನೆಯ ನಂತರ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿಯೂ ವಿಡಿಯೋ ಹಂಚಿಕೊಂಡಿದ್ದಾನೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, "ಸಂತ್ರಸ್ತೆ ಸರೋಜ್ ತನ್ನ ಸಹೋದರನ ಮಾತು ಕೇಳಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ" ಎಂದರು. ನೆರೆಹೊರೆಯವರಾದ ಪವನ್ ಗುಪ್ತಾ ಅವರ ಪತ್ನಿ ಪ್ರತೀಕ್ಷಾ ಇತ್ತೀಚೆಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ತನ್ನ ಹೆಂಡತಿ ಜಯಗಳಿಸಿದ ನಂತರ ಪವನ್, ನನಗೆ "ಬೆದರಿಕೆ" ಹಾಕುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಭಾನುವಾರ ಸಂತ್ರಸ್ತೆಯ ತಾಯಿ ಊರ್ಮಿಳಾ ಅವರು ಪವನ್ ಜೊತೆ ಜಗಳವಾಡಿದ್ದಾರೆ. ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. "ಪೊಲೀಸರು ನನ್ನನ್ನು ಮತ್ತು ನನ್ನ ಪತಿಯನ್ನು ಠಾಣೆಗೆ ಕರೆದೊಯ್ದಾಗ, ನನ್ನ ಮಗಳು ಅಸಮಾಧಾನಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ" ಎಂದು ಊರ್ಮಿಳಾ ಹೇಳಿದ್ದಾರೆ.