ಇಂಫಾಲ್/ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾಜ್ಯಕ್ಕೆ ಆಗಮಿಸಿದ ಶಾ ಅವರು ರಾಜ್ಯಪಾಲೆ ಅನುಸೂಯಾ ಉಯಿಕೆ ಮತ್ತು ಮುಖ್ಯಮಂತ್ರಿ ಬಿರೇನ್ ಸಿಂಗ್ ಸೇರಿ ಹಲವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಮೇ 3ರಿಂದ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ ರಾಜ್ಯಾದ್ಯಂತ ಉಂಟಾದ ಜನಾಂಗೀಯ ಘರ್ಷಣೆಗಳಲ್ಲಿ ಅಂದಾಜು 80 ಜನರು ಮೃತಪಟ್ಟಿದ್ದಾರೆ. ಮತ್ತೆ ಹೊಸವಾಗಿ ಗಲಭೆಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಸೋಮವಾರ ಕೇಂದ್ರ ಗೃಹ ಸಚಿವರು ನಾಲ್ಕು ದಿನಗಳ ಸುದೀರ್ಘವಾದ ಭೇಟಿ ನೀಡಿದ್ದಾರೆ. ಗೃಹ ಕಾರ್ಯದರ್ಶಿಯೊಂದಿಗೆ ಆಗಮಿಸಿದ ಅವರು ತಡರಾತ್ರಿ ಸಿಎಂ ಬಿರೇನ್ ಸಿಂಗ್, ಕೆಲ ಸಚಿವರು ಮತ್ತು ಗುಪ್ತಚರ ಹಾಗೂ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥ ತಪನ್ ದೇಕಾ ಹಾಗೂ ರಾಜ್ಯ, ಕೇಂದ್ರದ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಗಳ ಗಗನಕ್ಕೇರಿದೆ. ಹೀಗಾಗಿ ದಿನ ಬಳಕೆ ವಸ್ತುಗಳ ಸರಬರಾಜುಗಳನ್ನು ಹೆಚ್ಚಿಸುವ ಕ್ರಮಗಳ ಜೊತೆಗೆ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಣಿಪುರದಲ್ಲಿ 30 ಭಯೋತ್ಪಾದಕರ ಹತ್ಯೆ: ಸಿಎಂ ಎನ್.ಬಿರೇನ್ ಸಿಂಗ್ ಮಾಹಿತಿ
ರಾಜ್ಯದ ಜನಸಂಖ್ಯೆಯ ಶೇ.53ರಷ್ಟಿರುವ ಮೇಟಿ ಸಮುದಾಯವು ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಬುಡಕಟ್ಟು ಜನಾಂಗದ ಕುಕಿಗಳು ಬಲವಾಗಿ ವಿರೋಧಿಸಿದ್ದಾರೆ. ಇದೇ ವಿಷಯವಾಗಿ ಹಿಂಸಾಚಾರ ಭುಗಿಲೆದ್ದಿದೆ. ಆದ್ದರಿಂದ ಮೇಟಿ ಮತ್ತು ಕುಕಿ ಎರಡೂ ಸಮುದಾಯಗಳ ರಾಜಕೀಯ ಮತ್ತು ಸಮಾಜದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗಿದೆ.
ಕುಕಿ ಜನಾಂಗದ ಅನೇಕ ಜನರು ರಕ್ಷಣೆಗಾಗಿ ನೆರೆಯ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಕುಕಿಗಳು ವಾಸಿಸುವ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತವನ್ನು ನೇಮಿಸಬೇಕು. ಇದು ಸಾಧ್ಯವಾಗದೇ ಹೋದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಕುಕಿ ಜನಾಂಗದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಮಹಿಳಾ ಪ್ರತಿನಿಧಿಗಳು ಸಹ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.