ನವದೆಹಲಿ: ಇಂದು ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ಬೆಳ್ಳಿ ಪದಕ ಗಳಿಸುವ ಮೂಲಕ ಪದಕ ಬೇಟೆ ಆರಂಭಿಸಿದೆ. ಶೂಟರ್‌ಗಳಾದ ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಈ ಸಾಧನೆ ಮಾಡಿದ್ದಾರೆ. ಸ್ಪರ್ಧೆಯ ತ್ರಿವಳಿ ಶೂಟರ್ಗಳ ಸಾಧನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ.
"ಈ ಮೂವರು ಶೂಟರ್‌ಗಳು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರಿಗೆ ಅಭಿನಂದನೆಗಳು. ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು ಅವರೊಂದಿಗೆ ಇರುತ್ತವೆ" ಎಂದು ಅಮಿತ್ ಶಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳೆಯರ ಏರ್ ರೈಫಲ್ ತಂಡ ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಭಾರತದ ಏರ್ ರೈಫಲ್ ತಂಡ ಒಟ್ಟು 1886 ಅಂಕ ಗಳಿಸಿತು. ಚೀನಾ 1896.6 ಅಂಕಗಳೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮಂಗೋಲಿಯಾ ಒಟ್ಟು 1880 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್: ಮಹಿಳೆಯರ ವೈಯಕ್ತಿಕ 10 ಮೀ ಏರ್ ರೈಫಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಕಂಚು
ವೈಯಕ್ತಿಕ ವಿಭಾಗದಲ್ಲಿ ರಮಿತಾಗೆ ಕಂಚು: ಮೆಹುಲಿ ಮತ್ತು ರಮಿತಾ ಕ್ರಮವಾಗಿ 2ನೇ ಮತ್ತು 5 ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ವೈಯಕ್ತಿಕ ಸ್ಪರ್ಧೆಯಲ್ಲಿ ಆಶಿ 623.3 ಅಂಕಗಳೊಂದಿಗೆ 29ನೇ ಸ್ಥಾನ ಪಡೆದರು. ಬಳಿಕ ರಮಿತಾ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ 230.1 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು. ಚೀನಾದ ಹಾನ್ ಜಿಯಾಯು 251.3 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಹುವಾಂಗ್ ಯುಟಿಂಗ್ 252.7 ಅಂಕಗಳೊಂದಿಗೆ ಚಿನ್ನ ಗೆದ್ದು ಬೀಗಿದ್ದಾರೆ. ಫೈನಲ್‌ಗೆ ಅರ್ಹತೆ ಪಡೆದ ಮತ್ತೊಬ್ಬ ಭಾರತೀಯ ಕ್ರೀಡಾಪಟು ಮೆಹುಲಿ ಘೋಷ್ 4ನೇ ಸ್ಥಾನ ಪಡೆದರು.
ಅರ್ಜುನ್ ಲಾಲ್-ಅರವಿಂದ್ ಸಿಂಗ್ ಜೋಡಿಗೆ ಬೆಳ್ಳಿ ಪದಕ: ಫುಯಾಂಗ್ ವಾಟರ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅರ್ಜುನ್ ಲಾಲ್ ಜಾತ್ ಮತ್ತು ಅರವಿಂದ್ ಸಿಂಗ್ ಜೋಡಿ ಪುರುಷರ ಲೈಟ್‌ವೇಟ್ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತದ ಈ ಜೋಡಿ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, 6:23.16 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೀನಾದ ಜುಂಜಿ ಫ್ಯಾನ್ ಮತ್ತು ಮ್ಯಾನ್ ಸನ್ ಅವರು ಚಿನ್ನದ ಪದಕ ಪಡೆದರು. ಉಜ್ಬೇಕಿಸ್ತಾನ್ ಜೋಡಿ ಶಖ್ಜೋದ್ ನುರ್ಮಾಟೋವ್ ಮತ್ತು ಸೊಬಿರ್ಜಾನ್ ಸಫರೊಲಿಯೆವ್ 6:33.42 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಶುರು: 2 ಬೆಳ್ಳಿ, 1 ಕಂಚು, ಫೈನಲ್‌ಗೇರಿದ ಮಹಿಳಾ ಕ್ರಿಕೆಟ್ ತಂಡ