ಉತ್ತರಕಾಶಿ (ಉತ್ತರಾಖಂಡ್): ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ. ಶನಿವಾರ ರಾತ್ರಿ ಇಲ್ಲಿನ ಉತ್ತರಕಾಶಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸುಮಾರು 36 ಮಂದಿ ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಈ ಸುರಂಗ ಮಾರ್ಗವು ಸಿಲ್ಕ್ಯಾರಾ ಮತ್ತು ದಂಡಲ್ಗೋನಾ ಸಂಪರ್ಕ ಮಾರ್ಗವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರಕಾಶಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ, ಸಿಲ್ಕ್ಯಾರಾ ಮತ್ತು ದಂಡಲ್ಗೋನಾಗೆ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದ ಸುರಂಗ ಮಾರ್ಗ ಶನಿವಾರ ರಾತ್ರಿ ಭಾಗಶಃ ಕುಸಿದುಬಿದ್ದಿದೆ. ಸಿಲ್ಕ್ಯಾರ ಕಡೆಯಿಂದ ಬ್ರಹ್ಮಕಾಲ್ ಹಾಗೂ ಪಾಲ್ಗಾಂವ್ ಕಡೆ ತೆರಳುವ ಸುರಂಗ ಮಾರ್ಗದ ಆರಂಭದಿಂದ ಸುಮಾರು 200 ಮೀಟರ್ನಷ್ಟು ಉದ್ದಕ್ಕೆ ಕುಸಿದು ಬಿದ್ದಿದೆ. ಹೈಡ್ರೋ ಎಲೆಕ್ಟ್ರಿಸಿಟಿ ಇನ್ವೆಸ್ಟ್ಮೆಂಟ್ ಆ್ಯಂಡ್ ಡೆವೆಲಪ್ಮೆಂಟ್ ಕಂಪೆನಿ ಈ ಸುರಂಗ ಮಾರ್ಗದ ಕಾಮಗಾರಿಯನ್ನು ನಡೆಸುತ್ತಿತ್ತು. ಈ ಸುರಂಗ ಮಾರ್ಗದೊಳಗೆ 36 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.