ಕರ್ನಾಟಕ

karnataka

ETV Bharat / bharat

ಏಕರೂಪ ನಾಗರಿಕ ಸಂಹಿತೆ ಭಾರತದ ಕಲ್ಪನೆಗೆ ವಿರುದ್ಧ: ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ

ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ
ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ

By

Published : Jul 2, 2023, 2:30 PM IST

ಶಿಲ್ಲಾಂಗ್ (ಮೇಘಾಲಯ):ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತು ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಶನಿವಾರ ಈಶಾನ್ಯ ರಾಜ್ಯ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಏಕರೂಪ ನಾಗರಿಕ ಸಂಹಿತೆ 'ಭಾರತದ ಕಲ್ಪನೆ'ಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಯುಸಿಸಿಯ ನಿಯಮಗಳು ಇದರ ವಿರುದ್ಧವಾಗಿದ್ದರೆ ಉತ್ತಮವಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆಯು 'ಏಕ ಭಾರತದ ಕಲ್ಪನೆ'ಗೆ ಸರಿಹೊಂದುವಂತೆ ತೋರುತ್ತಿಲ್ಲ. ಭಾರತ ಅದರ ವೈವಿಧ್ಯತೆಯಿಂದಲೇ ಪ್ರಖ್ಯಾತವಾಗಿದೆ. ಯುಸಿಸಿ ಕಲ್ಪನೆಯು ಇದನ್ನು ಬೆದರಿಸುವಂತಿದೆ. ಹೀಗಾಗಿ ಯುಸಿಸಿಯನ್ನು ಪಕ್ಷ ವಿರೋಧಿಸುತ್ತದೆ ಎಂದಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ನೆಲೆಯೂರಿರುವ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮದು ಮಾತೃಪ್ರಧಾನ ಸಮಾಜವಾಗಿದೆ. ಇದು ನಮ್ಮ ಶಕ್ತಿಯಾಗಿದೆ. ಯುಸಿಸಿ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರಶ್ನಿಸುವಂತಿದೆ. ಈಶಾನ್ಯ ರಾಜ್ಯದಲ್ಲಿ ಇಂತಹ ಯಾವುದೇ ಕಾನೂನನ್ನು ಜಾರಿ ಮಾಡುವುದು ಕಷ್ಟ. ಆದರೂ, ಯುಸಿಸಿ ಕರಡುಗಳ ನಿಯಮಗಳು ಏನೆಂಬುದರ ಮೇಲೆ ಸರ್ಕಾರ, ಪಕ್ಷ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು, ಏಕರೂಪ ನಾಗರಿಕ ಸಂಹಿತೆ ಬಿಜೆಪಿಯ ಚುನಾವಣಾ ಕಾರ್ಯಸೂಚಿಯಾಗಿದೆ. ಏಕರೂಪ ನಾಗರಿಕ ಸಂಹಿತೆಯ ಸುತ್ತ ಚರ್ಚೆಗಳನ್ನು ಹುಟ್ಟುಹಾಕುವುದು, ಕೋಮು ಭಾವನೆಯನ್ನು ಹೆಚ್ಚಿಸುವ ಕಾರ್ಯತಂತ್ರವಾಗಿದೆ ಎಂದು ಅವರು ಆರೋಪಿಸಿದ್ದರು.

ಇದು ಸಂಘ ಪರಿವಾರದ ಚುನಾವಣಾ ತಂತ್ರವಾಗಿದೆ. ಭಾರತದ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳಿದ್ದರೂ ಅದನ್ನು ವಿರೋಧಿಸೋಣ. ಪ್ರಜಾಪ್ರಭುತ್ವ ಚರ್ಚೆಗಳ ಮೂಲಕ ಸಾಮಾಜಿಕ ಸುಧಾರಣೆಗಳನ್ನು ಬೆಂಬಲಿಸೋಣ ಎಂದು ಟ್ವೀಟ್ ಮಾಡಿದ್ದರು.

ಯುಸಿಸಿ ಬಗ್ಗೆ ಮೋದಿ ಹೇಳಿದ್ದೇನು?:ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶವೆಂಬುದು ಒಂದು ಕುಟುಂಬ. ಅದರಲ್ಲಿ ಒಬ್ಬರಿಗೆ ಒಂದು ಕಾನೂನು, ಉಳಿವರಿಗೆ ಇನ್ನೊಂದು ಕಾನೂನು ಅನ್ವಯಿಸಲು ಸಾಧ್ಯವಿಲ್ಲ. ವಿಪಕ್ಷಗಳು ಮುಸ್ಲಿಮರನ್ನು ಬೇಕಂತಲೇ ಎತ್ತಿಕಟ್ಟುತ್ತಿವೆ. ಎರಡೆರಡು ಕಾನೂನುಗಳನ್ನು ಇಟ್ಟುಕೊಂಡು ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಖಂಡಿತ ಎಂಬ ಸುಳಿವು ನೀಡಿದ್ದರು.

ಮೂರು ಗಂಟೆ ಸಭೆ:ಭೋಪಾಲ್​ನಲ್ಲಿ ಮೋದಿ ಈ ಹೇಳಿಕೆ ನೀಡಿದ ಬೆನ್ನಲ್ಲೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತುರ್ತು ಸಭೆ ನಡೆದಿದೆ. ನಿನ್ನೆ ತಡರಾತ್ರಿ ಮೂರು ಗಂಟೆಗಳ ಕಾಲ ಕಾನೂನಿಗೆ ಸಹಮತ ಸೂಚಿಸಬೇಕೆ, ವಿರೋಧಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಕೊನೆಯಲ್ಲಿ ಕಾನೂನನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಯುಸಿಸಿ?:ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ದೇಶದ ಎಲ್ಲ ಜನರಿಗೆ ಅನ್ವಯಿಸುವ ಕಾನೂನಾಗಿದೆ. ಪ್ರಸ್ತುತ ದೇಶದಲ್ಲಿ ವಿವಿಧ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಚಾರಗಳಲ್ಲಿ ತಮ್ಮದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನು ಹೊಂದಿವೆ. ಇವು ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಿಲ್ಲ. ಹೀಗಾಗಿ ಇದನ್ನು ತೊಡೆದು ಹಾಕಿ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಂದೇ ಕಾನೂನಿನಡಿ ತರುವ ಪ್ರಯತ್ನವಾಗಿದೆ.

ಇದನ್ನೂ ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿದ ತ್ರಿವಳಿ ತಲಾಖ್ ಹೋರಾಟಗಾರ್ತಿ ನಿದಾ ಖಾನ್..

ABOUT THE AUTHOR

...view details