ಚೆನ್ನೈ (ತಮಿಳುನಾಡು) :ಬಿಜೆಪಿಯ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ್ದು ಈಗ ಇತಿಹಾಸ. ರಾಜ್ಯದ ಚುನಾವಣೆಯ ಹಿಂದೆ ಪಕ್ಕದ ತಮಿಳುನಾಡಿನ ಮಾಜಿ ಪ್ರಭಾವಿ ಅಧಿಕಾರಿಗಳೂ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎಂಬುದು ವಿಶೇಷ. ಇದರಲ್ಲಿ ಒಬ್ಬರು ಗೆಲುವಿನ ಸಂಭ್ರಮದಲ್ಲಿದ್ದರೆ, ಇನ್ನೊಬ್ಬರು ಸೋಲಿನ ಕಹಿ ಅನುಭವಿಸಿದರು.
ಆ ಮಾಜಿ ಅಧಿಕಾರಿಗಳು ಬೇರಾರೂ ಅಲ್ಲ, ಕರ್ನಾಟಕ ಕೇಡರ್ನ ಐಎಎಸ್, ಐಪಿಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ಮತ್ತು ಅಣ್ಣಾಮಲೈ. ಸಸಿಕಾಂತ್ ಸೆಂಥಿಲ್ ಅವರು ಇದೀಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರೆ, 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಪಡೆದಿದ್ದ ಅಣ್ಣಾಮಲೈ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.
ಇಬ್ಬರೂ ಅಧಿಕಾರಿಗಳಾಗಿ ಕರ್ನಾಟಕದಲ್ಲಿ ಕೆಲಸ ಮಾಡಿದ್ದರು. ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅಣ್ಣಾಮಲೈ ಅವರು ಐಪಿಎಸ್ ಅಧಿಕಾರಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಪಾಲನೆ ಕಾರ್ಯ ಮಾಡಿದ್ದಾರೆ. ಇಬ್ಬರೂ ಅಧಿಕಾರಿಗಳು ಹುದ್ದೆಯಿಂದ ವಿಮುಕ್ತರಾಗಿದ್ದು, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಾರ್ ರೂಂನಲ್ಲಿ ಸೆಂಥಿಲ್:ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ನ ವಾರ್ ರೂಂ ಮುಖ್ಯಸ್ಥರಾಗಿದ್ದ ಅವರು, ತಂಡವನ್ನು ಕಟ್ಟಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಸಾಂಘಿಕ ಹೋರಾಟ ನಡೆಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧವಾದ ವಿಷಯಗಳನ್ನು ಹರಡಿ ಪಕ್ಷಕ್ಕೆ ಬಲ ತುಂಬಿದ್ದರು.