ಇಂಫಾಲ (ಮಣಿಪುರ):ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಶಸ್ತ್ರಸಜ್ಜಿತ ತಂಡ ಹತ್ಯೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೋಮವಾರ ರಾತ್ರಿಯಿಂದಲೇ ಮೃತದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ವಿದ್ಯಾರ್ಥಿಗಳ ಶವವಿರುವ ಫೋಟೋಗಳು ವೈರಲ್ ಆಗುತ್ತಿವೆ.
ವಿದ್ಯಾರ್ಥಿಗಳನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿರುವ ಫೋಟೋದಲ್ಲಿ ಶಸ್ತ್ರಧಾರಿಗಳು ವಿದ್ಯಾರ್ಥಿಗಳ ಹಿಂದೆ ನಿಂತಿರುವುದನ್ನು ಫೋಟೋದಲ್ಲಿ ನೋಡಬಹುದು. ಪೊದೆಗಳ ನಡುವೆ ವಿದ್ಯಾರ್ಥಿಗಳ ಶವ ಎಸೆದಿರುವ ಮತ್ತೊಂದು ಫೋಟೋ ದೊರೆತಿದೆ.
ಕೊಲೆಯಾದ ವಿದ್ಯಾರ್ಥಿಗಳನ್ನು 17 ವರ್ಷದ ಬಾಲಕಿ ಮತ್ತು 20 ವರ್ಷದ ಮೈತೇಯಿ ಸಮುದಾಯಕ್ಕೆ ಸೇರಿದ ಯುವಕ ಎಂದು ಸರ್ಕಾರ ಗುರುತಿಸಿದೆ. ಜುಲೈ 6ರಂದು ಇಬ್ಬರೂ ನಾಪತ್ತೆಯಾಗಿದ್ದರು. ಜುಲೈ 6ರಂದು ಹುಡುಗಿ ತನ್ನ ಸ್ನೇಹಿತನೊಂದಿಗೆ ಹೊರಹೋಗಿದ್ದಳು. ಅಂದಿನಿಂದ ನಾಪತ್ತೆಯಾಗಿದ್ದರು. ಇಬ್ಬರು ಇಂಫಾಲ್ ಬಳಿಯ ನಂಬೋಲ್ ಕಡೆಗೆ ಹೋಗಿರುವುದು ಸಿಸಿಟಿವಿ ಕ್ಯಾಮರಾಗಳ ಮೂಲಕ ತಿಳಿದುಬಂದಿತ್ತು. ಬಳಿಕ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಫೋನ್ ಸಿಗ್ನಲ್‌ಗಳನ್ನು ಕೊನೆಯದಾಗಿ ಚುರಾಚಂದ್‌ಪುರ ಜಿಲ್ಲೆಯ ವಿಂಟರ್ ಫ್ಲವರ್ ಟೂರಿಸ್ಟ್ ಸೆಂಟರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು.